Kundapra.com ಕುಂದಾಪ್ರ ಡಾಟ್ ಕಾಂ

ಗುಜ್ಜಾಡಿ – ಬೆಣ್ಗೆರೆ ರಸ್ತೆ ಸಮೀಪದ ಸ್ವಾಗತ ಗೋಪುರ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಧರ್ಮದ ಮೇಲೆ ನಿಷ್ಠೆ ಹೊಂದಿರುವ ಮೇಸ್ತ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಈಗಾಗಲೇ ಸುಮಾರು 50 ಲಕ್ಷ ಮಂಜೂರಾಗಿದ್ದು, ಮುಂದಿನ ದಿನಗಳಲ್ಲಿ ಗುಜ್ಜಾಡಿ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಸಮಾಜದ ಅಭಿವೃದ್ಧಿಗೆ ಸರಕಾರದಿಂದ ಅಗತ್ಯ ನೆರವು ನೀಡಲು ಪ್ರಯತ್ನಿಸಲಾಗುವುದು. ಕಳೆದ 46 ವರ್ಷಗಳಿಂದ ನಿರಂತರವಾಗಿ ನಾಗಮಂಡಲೋತ್ಸವವನ್ನು ನಡೆಸಿಕೊಂಡು ಬಂದಿರುವ ಮೇಸ್ತ ಸಮಾಜ ಬಾಂಧವರು ದೇವಸ್ಥಾನದಲ್ಲಿ ನಿರಂತರವಾಗಿ ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ದೇವರ ಸಾನಿಧ್ಯ ವೃದ್ಧಿಗೆ ಶ್ರಮಿಸುತ್ತಿರುವುದು ಮತ್ತು ದೇವಸ್ಥಾನದ ಪ್ರತೀಕವಾಗಿರುವ ಸ್ವಾಗತ ಗೋಪುರ ನಿರ್ಮಿಸಿರುವುದು ಶ್ಲಾಘನೀಯ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರೀ ನಾಗ ದೇವಸ್ಥಾನದ ವತಿಯಿಂದ ಗುಜ್ಜಾಡಿ-ಬೆಣ್ಗೆರೆ ರಸ್ತೆ ಸಮೀಪ ನಿರ್ಮಿಸಲಾಗಿರುವ ಸ್ವಾಗತ ಗೋಪುರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್.ಮೇಸ್ತ, ಕಾರ್ಯದರ್ಶಿ ಶ್ರೀಧರ ಪಿ.ಮೇಸ್ತ, ಗುಜ್ಜಾಡಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಮೇಸ್ತ, ಮೇಸ್ತ ಸಮಾಜದ ಹಿರಿಯರಾದ ಗಣಪತಿ ಮೇಸ್ತ, ವಸಂತ ಮೇಸ್ತ, ಶಾಂತರಾಜ್ ಮೇಸ್ತ, ಕೃಷ್ಣ ಮೇಸ್ತ, ವಿಷ್ಣು ಮೇಸ್ತ, ಸೋಮನಾಥ ಮೇಸ್ತ, ಶಿಲ್ಪಿ ಪ್ರಭಾಕರ, ಶ್ರೀನಾಥ ಆಚಾರಿ, ಮೇಸ್ತ ಸಮಾಜ ಬಾಂಧವರು, ಭಕ್ತರು ಮತ್ತಿತರರು ಉಪಸ್ಥಿತರಿದ್ದರು. ಉಮೇಶ ಮೇಸ್ತ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Exit mobile version