Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಇಂದುಧರ ಯುವಕ ಮಂಡಲದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಡಾ. ಬಿ. ಆರ್. ಅಂಬೇಡ್ಕರ್ ಅವರು ದೀನ ದಲಿತರ ಏಳಿಗೆಗಾಗಿ ಅವಿರತ ಶ್ರಮಿಸಿದ್ದರು. ಇಡೀ ಜಗತ್ತಿನ ಶ್ರೇಷ್ಠವಾದ ನಮ್ಮ ದೇಶದ ಸಂವಿಧಾನವನ್ನು ಅನುಷ್ಠಾನಗೊಳಿಸಿ ಸಮಾಜದಲ್ಲಿ ಸಮಾನತೆಗಾಗಿ ಹೋರಾಟ ನಡೆಸಿದ್ದರು. ಅಸ್ಪ್ರಶ್ಯತೆ, ಅಸಮಾನತೆ ವಿರುದ್ಧ ಹೋರಾಡಿ ಪರಿಶಿಷ್ಟ ಜಾತಿ, ಪ.ಪಂಗಡದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುಡೂರ ಅಂಬಾಗಿಲು ಹೇಳಿದರು.

ಗಂಗೊಳ್ಳಿಯ ಇಂದುಧರ ಯುವಕ ಮಂಡಲ ಇದರ ಆಶ್ರಯದಲ್ಲಿ ಗಂಗೊಳ್ಳಿಯ ಶ್ರೀ ಇಂದುಧರ ಸಭಾಭವನದಲ್ಲಿ ಇಂದು ಆಯೋಜಿಸಲಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್‌ರವರ 130ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶುಭ ಹಾರೈಸಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಮತ್ತು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಶುಭಾಶಂಸನೆಗೈದರು. ಇದೇ ಸಂದರ್ಭ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸಮೀಕ್ಷಾ ನಾಯಕವಾಡಿ, ರಾಜ್ಯ ಮಟ್ಟದ ಕುಣಿತ ಭಜನಾ ಸಾಧಕರಾದ ಪ್ರವೀಣ ಮೊವಾಡಿ ಮತ್ತು ಸತೀಶ ಮೊವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮತ್ಸ್ಯೋದ್ಯಮಿಗಳಾದ ಮಂಜುನಾಥ ಜಿ.ಟಿ., ದೇವಸ್ಥಾನದ ಅಧ್ಯಕ್ಷ ಅರುಣ್ ಕುಮಾರ್ ಜಿ., ಮಾಜಿ ಅಧ್ಯಕ್ಷ ನರಸಿಂಹ ಕೆ., ಆಡಳಿತ ಮೊಕ್ತೇಸರ ಸಂಜೀವ ಜಿ.ಟಿ., ಯುವಕ ಮಂಡಲದ ಅಧ್ಯಕ್ಷ ಸಂದೇಶ ಜಿ.ಟಿ., ಗೌರವಾಧ್ಯಕ್ಷ ಗುರುರಾಜ್ ಬಿ,. ಇಂದುಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ಸುಶೀಲಾ, ದೇವಸ್ಥಾನದ ಪ್ರಧಾನ ಅರ್ಚಕ ಶಿವ ಜಿ.ಟಿ., ಸುರೇಶ ಜಿ., ಜಿ.ಈಶ್ವರ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮಂಡಳಿ ಕಾರ್ಯದರ್ಶಿ ನಾಗಿಣಿ ಸ್ವಾಗತಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂದೇಶ ಜಿ.ಟಿ. ವಂದಿಸಿದರು.

Exit mobile version