ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಹತ್ತು ವರ್ಷಗಳಿಂದ ಕುಂಟುತ್ತಾ ಸಾಗಿ ಬಂದು ಇನ್ನೇನು ಮುಗಿಯುವ ಹಂತದಲ್ಲಿದ್ದು, ಹೆದ್ದಾರಿ ಹೋರಾಟ ಸಮಿತಿ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ಮೇಲ್ಸೇತುವೆ ಮತ್ತು ಬಸ್ರೂರು ಮೂರುಕೈ ಎಂಬ್ಯಾಕ್ಮೆಂಟ್ ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸುವ ಲಕ್ಷಣ ಗೋಚರಿಸುತ್ತಿದೆ. ಉಳಿದಂತೆ, ಅಸಮರ್ಪಕ ಸರ್ವಿಸ್ ರಸ್ತೆಗಳು, ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಲ್ಲುವುದು, ಚರಂಡಿಯಲ್ಲಿ ನೀರು ಹರಿಯದೆ ಕೃತಕ ಕೆರೆಯಾಗುವುದು ಹೀಗೆ ಹತ್ತಾರು ತೊಂದರೆಗಳನ್ನು ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡುತ್ತಾ ಬಂದಿರುವ ನವಯುಗ ಕಂಪೆನಿ ಇಲ್ಲಿಂದ ಕಾಲ್ಕೀಳುವ ಹುನ್ನಾರ ನಡೆಸುತ್ತಿದೆ ಇದರ ಬಗ್ಗೆ ಸಾರ್ವಜನಿಕರು ತಕ್ಷಣವೇ ಜಾಗೃತರಾಗಬೇಕಾಗಿದೆ.
ಎಪ್ರಿಲ್ 17ರಂದು ಸಂಜೆ 4.00ಕ್ಕೆ ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಇರುವ ಆರ್. ಎನ್. ಶೆಟ್ಟಿ ಕಲ್ಯಾಣ ಭವನದಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತಿ ಸಮಿತಿಯವರು ಈ ಕುರಿತು ಸಾರ್ವಜನಿಕರೊಂದಿಗೆ ಚರ್ಚಿಸಲು ಸಭೆ ಕರೆದಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು ಮತ್ತು ಭವಿಷ್ಯದಲ್ಲಿ ಶಾಶ್ವತವಾಗಿ ತಲೆದೋರಬಹುದಾದ ಸಮಸ್ಯೆಗಳನ್ನು ಬಗೆಹರಿಸಲು, ಸುಗಮ ಮತ್ತು ಸುರಕ್ಷಿತ ವಾಹನ ಸಂಚಾರದ ಹಿತದೃಷ್ಟಿಯಿಂದ ಮತ್ತು ಈಗಾಗಲೇ ಈ ಕಾಮಗಾರಿಯ ಅವ್ಯವಸ್ಥೆಯಿಂದ ತೊಂದರೆಗೊಳಗಾದವರೆಲ್ಲರೂ ಈ ಸಭೆಯಲ್ಲಿ ಭಾಗವಹಿಸಿ ಅಸಮರ್ಪಕ ಹೆದ್ದಾರಿ ನಿರ್ಮಾಣದ ತೊಂದರೆಯಿಂದ ಪಾರಾಗಲು ಸಲಹೆ ಸೂಚನೆಗಳು ಹಾಗೂ ಸಭೆಯಲ್ಲಿ ತೆಗೆದುಕೊಳ್ಳಬಹುದಾದ ತೀರ್ಮಾನಕ್ಕೆ ಎಲ್ಲರೂ ಬೆಂಬಲ ನೀಡುವಂತೆ ಕೋರಿ, ಸಮಿತಿಯ ಸಂಚಾಲಕ ಕೆಂಚನೂರು ಸೋಮಶೇಖರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.