Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಡಾ. ಬಿ. ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ ಆಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನವ ಭಾರತದ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಕೊಡುಗೆ ದೊಡ್ಡದಿದೆ. ಅವರು ಕೇವಲ ಶೋಷಿತ ಸಮುದಾಯದ ನಾಯಕರಾಗಿರದೇ ವಿಶ್ವವೇ ಮೆಚ್ಚಿದ ನಾಯಕರಾಗಿದ್ದಾರೆ. ಅವರು ಸಂವಿಧಾನ ರಚಿಸುವಾಗ ಯಾವುದೇ ಸಮುದಾಯವನ್ನು ತಾರತಮ್ಯದಿಂದ ನೋಡದೇ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದರು. ದಮನಿತರು, ಶೋಷಣೆಗೆ ಒಳಗಾದವರು, ಧ್ವನಿ ಇಲ್ಲದವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದರು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಘಟನಾ ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೈಂದೂರು ತಾಲೂಕು ಶಾಖೆ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘ ಬೈಂದೂರು ಹಾಗೂ ದಸಂಸ ಮಹಿಳಾ ಘಟಕದ ಆಶ್ರಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿ, ದೇಶದ ಕೋಟಿ ಕೋಟಿ ಜನರಿಗೆ ಗೌರವಯುತವಾದ ಬದುಕನ್ನು ಕಲ್ಪಿಸಿಕೊಟ್ಟ ಅಂಬೇಡ್ಕರ್ ಅವರನ್ನು ಇಂದಿಗೂ ಕೆಲವು ಸ್ಥಾಪಿತ ಮನಸ್ಸುಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಟೀಕಿಸಿ ಆಧಾರವಿಲ್ಲದೇ ಮಾತನಾಡಿದರೆ ಕರ್ನಾಟಕ ರಾಜ್ಯ ದಸಂಸ ಅಂತವರ ವಿರುದ್ಧ ತೊಡೆತಟ್ಟಿ ನಿಲ್ಲುತ್ತದೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ವಿನಯಾ ಮಾಸ್ತಿಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಭಂಡಾರ್ಕಾರ್ಸ್ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಡಾ. ರೇಖಾ ಬನ್ನಾಡಿ, ದ.ಸಂ.ಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಕುಂದಾಪುರ ಬೈಂದೂರು ತಾಲೂಕು ದ.ಸಂ.ಸ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್, ಬೈಂದೂರು ತಾಲೂಕು ದ.ಸಂ.ಸ ಸಂಚಾಲಕ ಮಂಜುನಾಥ ನಾಗೂರು, ಗಾಯಕ ಗಣೇಶ್ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಬೈಂದೂರು ಪಟ್ಟಣ ಪಂಚಾಯತ್ ಪೌರ ಕಾರ್ಮಿಕರು, ದಲಿತ ಸಂಘರ್ಷ ಸಮಿತಿಯ ಹಿರಿಯ ಹೋರಾಟಗಾರರು, ವಿವಿಧ ಕ್ಷೇತ್ರದ ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ದಲಿತ ಸಂಘರ್ಷ ಸಮಿತಿಯ ನಾಗೇಶ್ ಉಪ್ಪುಂದ ಸ್ವಾಗತಿಸಿ, ಸುರೇಶ್ ಕುಮಾರ್ ವಂದಿಸಿದರು. ಶಿಕ್ಷಕಿ ಚೈತ್ರಾ ಯಡ್ತರೆ ಕಾರ್ಯಕ್ರಮ ನಿರೂಪಿಸಿದರು.

Exit mobile version