ಜಿಲ್ಲೆಯ ರೈತರು ಇನ್ನು ಮುಂದೆ ತಮ್ಮ ಕೃಷಿ ಭೂಮಿಯಲ್ಲಿನ ಸಮಸ್ಯೆಗಳ ಕುರಿತು ಅಧಿಕಾರಿಗಳ ಮೊಬೈಲ್ ಸಂಖ್ಯೆ ಹುಡುಕಿ ಕರೆ ಮಾಡುವುದು, ಅಧಿಕಾರಿಗಳನ್ನು ಹುಡುಕಿಕೊಂಡು ಕೃಷಿ ಇಲಾಖೆಯ ಕಚೇರಿಗೆ ತೆರಳಿ, ಅಧಿಕಾರಿಗಳನ್ನು ಕಾಯುವುದು, ಅವರು ವಿವಿಧ ಕೆಲಸದ ಒತ್ತಡದಲ್ಲಿ ತಕ್ಷಣ ನಿಮಗೆ ಸಿಗದೇ ಇರುವುದು ಈ ಎಲ್ಲಾ ಸಮಸ್ಯೆಗಳು ಇನ್ನಿಲ್ಲ.. ಏಕೆಂದರೆ ಕೃಷಿ ಸಂಜೀವಿನಿ ರೈತ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 155513 ಗೆ ರೈತರು ಒಂದು ಫೋನ್ ಕರೆ ಮಾಡಿದ್ದಲ್ಲಿ ಅಧಿಕಾರಿಗಳು/ಸಿಬ್ಬಂದಿಗಳೇ ರೈತರ ಮನೆ ಬಾಗಿಲಿಗೆ, ಜಮೀನುಗಳಿಗೆ ಬಂದು, ಕೃಷಿ ಸಂಬಂಧಿತ ಅಗತ್ಯ ಸಲಹೆ, ಸೂಚನೆ, ಸಮಸ್ಯೆಗೆ ಪರಿಹಾರ ನೀಡಲಿದ್ದಾರೆ.
ಕೃಷಿ ಸಂಜೀವಿನಿಯ ಸಹಾಯವಾಣಿ 155313 ಸಂಖ್ಯೆಯು ಟೋಲ್ ಫ್ರೀ ಸಹಾಯವಾಣಿಯಾಗಿದ್ದು, ಯಾವುದೇ ಮೊಬೈಲ್ನಿಂದ ಹಾಗೂ ಸ್ಥಿರ ದೂರವಾಣಿಯಿಂದ ಕರೆ ಮಾಡಬಹುದು. ಜಿಲ್ಲೆಯ ಯಾವುದೇ ಸ್ಥಳದಿಂದ ಈ ಸಂಖ್ಯೆಗೆ ಕರೆ ಮಾಡಿದಲ್ಲಿ, ಈ ಕರೆಯು ಕೃಷಿ ಇಲಾಖೆಯ ಬೆಂಗಳೂರು ಕಚೇರಿಗೆ ಹೋಗಲಿದ್ದು, ಅಲ್ಲಿಂದ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮಾಹಿತಿ ತಲುಪಲಿದೆ. ಅಲ್ಲಿಂದ ಜಿಲ್ಲೆಯಲ್ಲಿರುವ ಕೃಷಿ ಸಂಜೀವಿನಿ ವಾಹನಕ್ಕೆ, ಕರೆ ಮಾಡಿದ ಸಂಬಂಧ ಪಟ್ಟ ರೈತರ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಸಮಸ್ಯೆಗಳ ಕುರಿತು ಮಾಹಿತಿ ರವಾನೆಯಾಗುತ್ತದೆ. ನಂತರ ಅಧಿಕಾರಿಗಳು ರೈತರ ವಿಳಾಸಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ.
ಉಡುಪಿ ಜಿಲ್ಲೆಗೆ ನೀಡಿರುವ ಕೃಷಿ ಸಂಜೀವಿನಿ ವಾಹನದಲ್ಲಿ, ಮಣ್ಣು ಪರೀಕ್ಷೆ ನಡೆಸುವ ಯಂತ್ರ ಸೇರಿದಂತೆ ಅಗತ್ಯ ಉಪಕರಣಗಳನ್ನು ಅಳವಡಿಸಿದ್ದು, ಸಮಸ್ಯೆ ಕುರಿತು ಕರೆ ಮಾಡುವ ರೈತರ ಜಮೀನಿಗೆ ತೆರಳಲಿರುವ ವಾಹನ ಮತ್ತು ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲು ಇದೇ ಉದ್ದೇಶಕ್ಕಾಗಿ ನಿಯೋಜಿಸಿರುವ ಕೃಷಿ ಡಿಪ್ಲೋಮೊ ಪಡೆದ ಸಿಬ್ಬಂದಿ ಹಾಗೂ ಸಂಬAದಪಟ್ಟ ವ್ಯಾಪ್ತಿಯ ಕೃಷಿ ಇಲಾಖೆ ಅಧಿಕಾರಿಗಳು, ರೈತರಿಗೆ ಅವರ ಸ್ಥಳದಲ್ಲಿಯೇ ಮಣ್ಣಿನ ಅರೋಗ್ಯ ಸಂಬಂಧಿತ ಸಮಸ್ಯೆಯ ಪರೀಕ್ಷೆ ನಡೆಸುವುದು ಸೇರಿದಂತೆ ಕೃಷಿ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಅಗತ್ಯ ಸಲಹೆ ಸೂಚನೆ ನೀಡುವುದರ ಮೂಲಕ, ಕೃಷಿ ಚಟುವಟಿಕೆಗಳಿಗೆ ಇರುವ ತೊಂದರೆಗಳ ನಿವಾರಣೆ ಮಾಡಲಿದ್ದಾರೆ.
ರೈತರಿಗೆ ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ರಸಗೊಬ್ಬರಗಳ ಸಮರ್ಪಕ ಬಳಕೆ, ರೋಗ – ಕೀಟಗಳ ಹತೋಟಿ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ, ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸುವುದು ಕೃಷಿ ಇಲಾಖೆಯ ಪ್ರಮುಖ ಕರ್ತವ್ಯವಾಗಿದೆ.
ಕೃಷಿ ಸಂಜೀವಿನಿಯ ಮೂಲಕ, ಬೆಳೆಯ ಎಲ್ಲಾ ಹಂತಗಳಲ್ಲಿ ಕಂಡು ಬರಬಹುದಾದ, ಕೀಟ / ರೋಗ / ಕಳೆಗಳ ನಿರ್ವಹಣಾ ಮಾರ್ಗೋಪಾಯಗಳನ್ನು ರೈತರಿಗೆ ಸಕಾಲದಲ್ಲಿ ತಿಳಿಸುವುದು ಪ್ರಮುಖ ಉದ್ದೇಶವಾಗಿದೆ. ಕೃಷಿ ಸಂಜೀವಿನಿ ವಾಹನವು ಮಿನಿ ಸಂಚಾರಿ ಲ್ಯಾಬ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಡುಪಿ ಜಿಲ್ಲೆಯ ರೈತರು ಕೃಷಿ ಸಂಜೀವಿನಿಯ ಪ್ರಯೋಜನ ಪಡೆಯುವುದರ ಮೂಲಕ ತಮ್ಮ ಜಮೀನುಗಳಲ್ಲಿ ಇರುವ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಂಡು, ಉತ್ತಮ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವಾಗಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ಹಾಗೂ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.