Kundapra.com ಕುಂದಾಪ್ರ ಡಾಟ್ ಕಾಂ

ಕಾಲೇಜು ವಿದ್ಯಾರ್ಥಿ ವಿಘ್ನೇಶ್ ಆತ್ಮಹತ್ಯೆ

ಕುಂದಾಪುರ: ಪದವಿ ಕಾಲೇಜಿನಲ್ಲಿ ತೃತೀಯ ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಮನೆಯ ಒಳಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಸಂಜೆ ಗಂಗೊಳ್ಳಿಯಲ್ಲಿ ನಡೆದಿದೆ. ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾದ ಗೋಪಾಲ ಖಾರ್ವಿ ಎಂಬುವರ ಪುತ್ರ ವಿಘ್ನೇಶ್ ಖಾರ್ವಿ(19) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಕೋಟೇಶ್ವರದ ಸರ್ಕಾರೀ ಪದವಿ ಕಾಲೇಜಿನಲ್ಲಿ ತೃತೀಯ ಪದವಿ ಬಿಬಿಎಂ ಓದುತ್ತಿದ್ದ ವಿಘ್ನೇಶ ಖಾರ್ವಿ ಶನಿವಾರ ಎಂದಿನಂತೆ ಕಾಲೇಜಿಗೆ ಹೋಗಿ ಬಂದಿದ್ದರು. ಭಾನುವಾರ ರಜೆಯಾಗಿದ್ದರಿಂದ ಮನೆಯಲ್ಲಿಯೇ ಇದ್ದರೆಂದು ಮನೆಯವರು ತಿಳಿಸಿದ್ದಾರೆ. ಭಾನುವಾರ ಸಂಜೆ ಮನೆಯಲ್ಲಿದ್ದ ಇತರರು ಹೊರಗಡೆ ಹೋದ ಸಂದರ್ಭ ಮನೆಯೊಳಗೆ ನೇಣು ಬಿಗಿದುಕೊಂಡಿದ್ದಾರೆ. ಈ ಸಂದರ್ಭ ಮನೆಯ ಸದಸ್ಯರೊಬ್ಬರು ಒಳಗೆ ಬಂದಿದ್ದು, ಉಳಿದವರನ್ನು ಕರೆದಿದ್ದಾರೆನ್ನಲಾಗಿದೆ. ತಕ್ಷಣ ಅವರನ್ನು ಹಗ್ಗದಿಂದ ಬಿಡಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version