Kundapra.com ಕುಂದಾಪ್ರ ಡಾಟ್ ಕಾಂ

ಕೊಲ್ಲೂರು ಅಗ್ನಿತೀರ್ಥದಲ್ಲಿ ಮಾಲಿನ್ಯ ನಿವಾರಿಸದಿದ್ದರೆ ಹಸಿರು ಪೀಠದಲ್ಲಿ ದಾವೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊಲ್ಲೂರಿನ ಸೌಪರ್ಣಿಕಾ ನದಿ ಹಾಗೂ ಅದಕ್ಕೆ ಸೇರುವ ಅಗ್ನಿತೀರ್ಥ ಸಂಪೂರ್ಣ ಮಲಿನಗೊಂಡಿದ್ದು ಜಲಚರಗಳು, ಕಾಡುಪ್ರಾಣಿಗಳು ಹಾಗೂ ಜನರ ಆಪತ್ತು ಎದುರಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಹಾಗೂ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆಯುಂಟಾಗಿದೆ. ಈ ಬಗ್ಗೆ ಎಲ್ಲಾ ಹಂತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೂ ಹಲವು ಭಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನವಿಲ್ಲ. ಈ ಭಾರಿಯೂ ಮತ್ತೆ ಮನವಿ ಮಾಡಿದ್ದು ಒಂದು ವಾರದೊಳಕ್ಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಜಿಲ್ಲಾಡಳಿತದ ವಿರುದ್ಧ ಹಸಿರು ಪೀಠದಲ್ಲಿ ದಾವೆ ಹೂಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ ಕೋಟ ಹೇಳಿದ್ದಾರೆ.

ಕುಂದಾಪುರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಮೂಕಾಂಬಿಕೆಯ ಕ್ಷೇತ್ರಕ್ಕೆ ಬರುವ ಕೋಟ್ಯಾಂತರ ಭಕ್ತರು ಈ ಪುಣ್ಯತೀರ್ಥದಲ್ಲಿ ಪವಿತ್ರ ಸ್ನಾನವನ್ನು ಮಾಡುವ ಧಾರ್ಮಿಕ ಆಚರಣೆಗಳಿವೆ. ಪ್ರತಿ ವರ್ಷದ ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಆಚರಣೆಯ ವೇಳೆ ದೇವರಿಗೆ ಇದೆ ಪುಣ್ಯತಿರ್ಥದಲ್ಲಿ ತೆಪ್ಪೋತ್ಸವ ಮತ್ತು ಅವಭೃತ ಸ್ನಾನ ಮಾಡುವ ಆಚಣೆಯೂ ಇದೆ. ಜಲಚರಗಳು, ಪ್ರಾಣಿಗಳು ಈ ನದಿಯನ್ನೇ ಅವಲಂಬಿಸಿದೆ. ಆದರೆ ನದಿಯ ಮಾಲಿನ್ಯದಿಂದ ಎಲ್ಲದಕ್ಕೂ ಧಕ್ಕೆ ಉಂಟಾಗಿದೆ. ಅಗ್ನಿತೀರ್ಥ ನದಿಯು ಎರಡೂ ದಡದಲ್ಲಿ ಇರುವ ಕಲ್ಯಾಣ ಮಂಟಪ,
ವಸತಿಗೃಹ, ಹೋಟೆಲ್ ಸೇರಿದಂತೆ ಅನೇಕ ವಾಣಿಜ್ಯ ಚಟುವಟಿಕೆಯ ಕಟ್ಟಡದಲ್ಲಿ ಉಪಯೋಗಿಸಿ ಹೊರಬರುವ ತ್ಯಾಜ್ಯ ನೀರು ಅಗ್ನಿತೀರ್ಥವನ್ನು ಸೇರುತ್ತದೆ. ದೇವಸ್ಥಾನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರು ಉಪಯೋಗಿಸಿ ಎಸೆದಿರುವ ಘನ ತ್ಯಾಜ್ಯಗಳು ಇದೆ ಪುಣ್ಯ ನದಿಯನ್ನು ಸೇರಿಕೊಂಡು ಒಟ್ಟಾರೆಯಾಗಿ ಸೌಪರ್ಣಿಕ ನದಿಯು ವಿಷಪೂರಿತ ಕಲುಷಿತ ತೀರ್ಥವಾಗುತ್ತಿದೆ. ವರ್ಷದ ಮಳೆಗಾಲದ ಮೂರು ತಿಂಗಳು ಹೊರತುಪಡಿಸಿ ಉಳಿದ ಋತುಗಳಲ್ಲಿ ನೀರಿನ ನಿರಂತರ ಹರಿಯುವಿಕೆ ಇಲ್ಲದೆ ಇರುವುದರಿಂದ ವಿಷಪೂರಿತ ನೀರನ್ನು ಕುಡಿದು ಇಲ್ಲಿನ ಅಮೂಲ್ಯ ಮತ್ಸ ಸಂಪತ್ತು, ಜಲಚರಗಳು ಹಾಗೂ
ಮೂಕಾಂಬಿಕಾ ಅಭಯಾರಣ್ಯದ ಪ್ರಾಣಿ ಸಂಕುಲಗಳು ದೊಡ್ಡ ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿದೆ. ಕೊಳಚೆ ಹಾಗೂ ಕೆಸರು ಮಯವಾದ ಈ ನೀರಿನಿಂದ ಹರಡುವ ಹಬ್ಬು ವಾಸನೆ ಹಾಗೂ ಸೊಳ್ಳೆಗಳಿಂದಾಗಿ ಪರಿಸರದ ಜನರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.

ಕೊಲ್ಲೂರು ಗ್ರಾಮದ ಸರ್ವೇ ನಂಬ್ರ 118/1 ರಲ್ಲಿ ಇರುವ ಕಂದಾಯ ಇಲಾಖೆಯಲ್ಲಿ ಪರಂಬೂರು ಹೊಳೆ ಎಂದು ನಮೂದಿಸಲಾಗಿದ್ದು ಈ ನದಿಯ ಎರಡು ಕಡೆಯಲ್ಲಿ ನದಿ ಹಾಗೂ ಅರಣ್ಯ ಭೂಮಿಯನ್ನು ಅತಿಕ್ರಮಿಸಿ, ಅನಧೀಕೃತ ವಸತಿಗೃಹ ಹಾಗೂ ಹೋಟೆಲ್ಗಳು ನಿರ್ಮಾಣವಾಗಿದೆ. ಪರೋಕ್ಷವಾಗಿ ಪುಣ್ಯತೀರ್ಥಗಳ ಮಲೀನಕ್ಕೆ ಕಾರಣವಾಗುತ್ತಿರುವ ಅನಧೀಕೃತ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಹಾಗೂ ಸರಕಾರದ ಸಂಬಂಧಿಸಿದ ಅಧಿಕಾರಿಗಳು ಕ್ರಮವನ್ನು ಕೈಗೊಳ್ಳಬೇಕು. ಹೊಳೆಯನ್ನು ಅತಿಕ್ರಮಿಸಿ ನದಿ ಪಾತ್ರವನ್ನು ಕಡಿಮೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಇಲ್ಲದೆ ಇದ್ದರೆ ಸವ್ರೋಚ್ಚ ನ್ಯಾಯಾಲಯದ ಹಸಿರು ಪೀಠದಲ್ಲಿ ವ್ಯಾಜ್ಯ ಹೂಡಲಾಗುವುದು ಎಂದವರು ಎಚ್ಚರಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು ಮಾತನಾಡಿ ಅರಣ್ಯ ಪ್ರದೇಶಕ್ಕೆ ಸೇರಿದ ಕೊಲ್ಲೂರಿನ ಸೌಪರ್ಣಿಕ ನದಿ ಹತ್ತಿರ ಇರುವ ಗಣೇಶ ದೇವಸ್ಥಾನದಿಂದ ಕಾಶಿ ಹೊಳೆಯವರೆಗೆ ಅಂದಾಜು 250 ಮೀಟರ್ ಉದ್ದಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆ ನಿರ್ಮಾಣದ ಕುರಿತು ಕೊಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಮಾಹಿತಿಯು ಇಲ್ಲ. ರಸ್ತೆ ನಿರ್ಮಾಣದ ಪೂರ್ವದಲ್ಲಿ ಅರಣ್ಯ ಇಲಾಖೆ ಸೇರಿದಂತೆ ಪರಿಸರ ಹಾಗೂ ಇತರ ಇಲಾಖೆಗಳಿಂದ ಪೂರ್ವಾನುಮತಿಯನ್ನು ಪಡೆದುಕೊಂಡಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಸೌಪರ್ಣಿಕ ಪುಣ್ಯನದಿಗೆ ಹೆಸರು ಬರಲು ಕಾರಣವಾದ ’ಸುವರ್ಣ’ ಗರುಡನು ತಪಸ್ಸು ಮಾಡಿರುವ ಪುಣ್ಯ ಸ್ಥಳವನ್ನು ಅತಿಕ್ರಮಿಸಿಕೊಂಡು, ಸೌಪರ್ಣಿಕ ನದಿಯನ್ನು ಅನಧೀಕೃತವಾಗಿ ತುಂಬಿಸಿ ಬೆರಳಣಿಕೆಯ ಉದ್ಯಮಿಗಳ ವ್ಯವಹಾರಗಳ ಅನುಕೂಲ ಮಾಡಿಕೊಡಲು ರಿಂಗ್ ರಸ್ತೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಂಪತ್ತನ್ನು ನಾಶಮಾಡಲಾಗಿದೆ

ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ವಿರೋಧ ಸಂರಕ್ಷಣಾ ಮೀಸಲು ಅರಣ್ಯ ಭೂಮಿಯನ್ನು ಹಾಗೂ ನೈಸರ್ಗಿಕವಾಗಿ ಹರಿಯುವ ನದಿ ಪ್ರದೇಶವನ್ನು ಅತಿಕ್ರಮಿಸಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿರುವವರ ಕುರಿತು ಸರಕಾರ ಐಪಿಎಸ್ ಅಥವಾ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಕೆ ನಡಸಬೇಕು, ಕಾನೂನು ಬಾಹಿರವಾಗಿ ರಸ್ತೆ ನಿರ್ಮಾಣಕ್ಕೆ ಕಾರಣವಾದವರ ವಿರುದ್ದ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕೊಲ್ಲೂರಿನ ಪರಂಪರೆ, ಇತಿಹಾಸ, ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಿರುವ ಈ ಅನಧಿಕೃತ ರಸ್ತೆಯನ್ನು ತೆರವುಗೊಳಿಸಿ, ನದಿಯ ಅತಿಕ್ರಮಣವನ್ನು ನಿವಾರಣೆ ಮಾಡಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಮಾಧ್ಯಮಗೋಷ್ಠಿಯಲ್ಲಿ ವಿವೇಕ ಜಿ. ಸುವರ್ಣ ಉಡುಪಿ, ರಾಜೇಂದ್ರ ಸಂಗಮ್, ಧನಂಜಯ್ ಉಪಸ್ಥಿತರಿದ್ದರು.

 

Exit mobile version