Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್‌ನ 30ನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸಂಘ ಸಂಸ್ಥೆಗಳು ನಿರಂತರ ಚಟುವಟಿಕೆ ನಡೆಸುತ್ತಾ ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಸಮಾಜದ ಕಟ್ಟಕಡೆಯ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಮೀನುಗಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಮೀನುಗಾರ ಕುಟುಂಬದ ಅಭಿವೃದ್ಧಿ ಹಾಗೂ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಿ ಪರಿಸರದಲ್ಲಿ ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿರುವ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ. ಸಂಸ್ಥೆಯು ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಬಿಜೆಪಿ ಬೈಂದೂರು ಮಂಡಲ ಉಪಾಧ್ಯಕ್ಷ ವಿನೋದ ಕುಮಾರ್ ಗುಜ್ಜಾಡಿ ಹೇಳಿದರು.

ಅವರು ಗಂಗೊಳ್ಳಿಯ ಲೈಟ್‌ಹೌಸ್ ಸಮೀಪದ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್‌ನ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.

ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು ಅಧ್ಯಕ್ಷತೆ ವಹಿಸಿದ್ದರು. ಜಡ್ಕಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಜಾಕ್ಷಿ ಎಸ್.ಶೆಟ್ಟಿ, ಗಂಗೊಳ್ಳಿ ರಾಮಕ್ಷತ್ರೀಯ ಯುವಕ ಮಂಡಲ ಅಧ್ಯಕ್ಷ ರಾಜೇಂದ್ರ ಶೇರುಗಾರ್ ಶುಭ ಹಾರೈಸಿದರು. ರಾಜ್ಯ ಮಟ್ಟದ ದೇಹದಾರ್ಢ್ಯ ಪಟು ಸೋಮಶೇಖರ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ಗಂಗೊಳ್ಳಿ ಮಹಾಸತಿ ಮಹಿಳಾ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷೆ ಶೈಲಾ ಎಂ.ಖಾರ್ವಿ ಧ್ವಜಾರೋಹಣ ನೆರವೇರಿಸಿದರು.

ಸಂಘದ ಅಧ್ಯಕ್ಷ ಬಿ.ನಾಗರಾಜ ಖಾರ್ವಿ ಸ್ವಾಗತಿಸಿದರು. ಕಾರ್ಯದರ್ಶಿ ಜಿ.ಕೇಶವ ಖಾರ್ವಿ ವರದಿ ವಾಚಿಸಿದರು. ಸುಂದರ ಜಿ. ಕಾರ್ಯಕ್ರಮ ನಿರೂಪಿಸಿದರು. ಮಡಿ ವಿಶ್ವನಾಥ ಖಾರ್ವಿ ವಂದಿಸಿದರು.

Exit mobile version