Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆ

ಕುಂದಾಪುರ: ಸನ್ನಿವೇಶಗಳು ಹಾಗೂ ಒತ್ತಡಗಳು ಸಮಸ್ಯೆಯನ್ನು ಎದುರಿಸಲಾಗದ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಇದಕ್ಕೆ ರೈತನೂ ಹೊರತಾಗಿಲ್ಲ. ತಮ್ಮ ಶೃಮಕ್ಕೆ ಸರಿಯಾದ ಪ್ರತಿಫಲ ದೊರಕದೆ ಇದ್ದಾಗ ರೈತ ಅನೀವಾರ್ಯವಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವಂತಹ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಸರ್ಕಾರ ಈ ಪರಿಸ್ಥಿತಿ ಬರುವ ಮೊದಲೆ ಅವರಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ನುಡಿದರು.

ನಗರದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ  ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಹಾಗೂ ಆಮಂತ್ರಿತರ ಸಭೆಯಲ್ಲಿ ಅವರು ಮಾತನಾಡಿದರು.

ರೈತರು ಪಡೆದುಕೊಂಡ ಸಾಲದ ಸದ್ವಿನಿಯೋಗವಾಗಬೇಕು. ಇದಕ್ಕಾಗಿ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು. ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳಿಗೆ ಅರ್ಥವಿಲ್ಲ. ಎಷ್ಟೇ ಕೋಟಿ ಹಣ ನೀಡಿದರೂ ಹೋದ ಒಂದು ಜೀವವನ್ನು ವಾಪಾಸು ತರಲು ಸಾಧ್ಯವಿಲ್ಲ. ಆತ್ಮಹತ್ಯೆಯ ನಂತರ ನೀಡುವ ಪರಿಹಾರಗಳು ಕೂಡ ಸಮಸ್ಯೆಗೆ ಶಾಶ್ವತ ಮುಕ್ತಿಯನ್ನು ನೀಡುವುದಿಲ್ಲ ಎಂದು ಹೇಳಿದ ಅವರು ರೈತರ ಆತ್ಮಹತ್ಯೆಗೆ ಕಾರಣವಾಗುವ ಅಂಶಗಳ ಕುರಿತು ಸರ್ಕಾರ ವಿಶೇಷವಾದ ಅಧ್ಯಯನ ನಡೆಸಿ ಸಮಸ್ಯೆಗೆ ಶಾಶ್ವತವಾದ ಪರಿಹಾರ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಂದುವರೆದು ಮಾತನಾಡಿದ ಅವರು ಕಂದಾಯ ಇಲಾಖೆಯ ಇಬ್ಬಗೆಯ ಧೋರಣೆ ಹಾಗೂ ಅಧಿಕಾರಿಗಳ ನಿಷ್ಕ್ರೀಯತೆಯಿಂದಾಗಿ ರೈತರು ಸಂಕಷ್ಟದ ಸ್ಥಿತಿಗೆ ತಲುಪುವಂತಾಗಿದೆ. ಅಕ್ರಮ-ಸಕ್ರಮ, ೯೪ ಸಿ ಹಾಗೂ ಕುಮ್ಕಿ ಭೂಮಿಗಳ ವಿಚಾರದಲ್ಲಿ ಅಧಿಕಾರಿಗಳಲ್ಲಿಯೇ ಸ್ವಷ್ಟವಾದ ನಿಲುವುಗಳು ಇಲ್ಲ. ಆಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ಮಂಜೂರಾತಿ ನೀಡಿ ಆದೇಶವಾದ ಪ್ರಕರಣಗಳನ್ನು ಮತ್ತೆ ರದ್ದು ಪಡಿಸುವ ಪ್ರಕ್ರಿಯೆಗಳು ನಡೆಯುತ್ತಿದೆ. ೨೦೧೦ ರಿಂದ ೨೦೧೨ ರವರೆಗೆ ಮಂಜೂರಾತಿ ನೀಡಿದ ೩೫೫ ಆದೇಶಗಳಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ. ಆದೇಶ ನೀಡವ ಮೊದಲೆ ಸಾಧಕ-ಬಾಧಕಗಳ ಬಗ್ಗೆ ಆಲೋಚನೆ ಮಾಡದೆ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ವಾಪಾಸು ಪಡೆಯುವುದು ಎಂತಹ ನೀತಿ ಎಂದು ಖಾರವಾಗಿ ಪ್ರಶ್ನಿಸಿದರು.

ಸರ್ಕಾರಿ ಅಧಿಕಾರಿಗಳ ಅಸಡ್ಡೆಯ ಧೋರಣೆಗಳು ರೈತರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಉಳ್ಳವರಿಗೆ ಮಾತ್ರ ಮಂಜೂರಾತಿ, ಬಡವರಿಗೆ ಕಾನೂನು ಎನ್ನುವ ಸ್ಥಿತಿಗಳು ಗೋಚರವಾಗುತ್ತಿದೆ. ಪ್ರಭಾವಶಾಲಿಗಳಿಗೆ ಸರ್ಕಾರಿ ಭೂಮಿಗಳು ಮಂಜೂರಾಗುತ್ತದೆ ಆದರೆ ಬಡವರಿಗೆ ಸಿಗಬೇಕಾದ ಹಕ್ಕನ್ನೆ ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಅವರು ಜಿಲ್ಲೆಯ ಜನರ ಮೌನವನ್ನೆ ಶರಣಾಗತಿ ಎಂದು ಅಧಿಕಾರಿಗಳು ಭಾವಿಸ ಬಾರದು, ಸಹನೆಯ ಕಟ್ಟೆಯೊಡೆದರೆ ಪ್ರತಿಯೊಬ್ಬರು ತಮ್ಮ ಹಕ್ಕನ್ನು ಪ್ರಶ್ನಿಸುವ ದಿನಗಳು ಬರಬಹುದು ಎಂದು ಮಾರ್ವಿಕವಾಗಿ ನುಡಿದ ಅವರು ಅಧಿಕಾರಿಗಳ ಧಮನಕಾರಿ ನೀತಿಯನ್ನು ನೋಡಿಕೊಂಡು ರೈತ ಸಂಘ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.

ಸಭೆಯಲ್ಲಿ ರೈತರ ಸರಣಿ ಆತ್ಮಹತ್ಯೆ, ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ, ಭೂ ಸಮೃದ್ದಿ ಯೋಜನೆಯ ಕಾರ್ಯಕ್ರಮದ ಗೊಂದಲ, ಪಶ್ಚಿಮ ವಾಹಿನಿ ಯೋಜನೆಯ ಶೀಘ್ರ ಅನುಷ್ಠಾನ, ನೀರಿನ ಸದ್ಭಳಿಕೆಗಾಗಿ ಸರಣಿ ಕಿಂಡಿ ಅಣೆಕಟ್ಟು ನಿರ್ಮಾಣ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ರೈತ ಸಂಘದ ಪ್ರಮುಖರಾದ ರಾಜೇಶ್ ಕುಂದಾಪುರ, ಶೇಷಗಿರಿ ಗೋಟ, ಸದಾನಂದ ಶೆಟ್ಟಿ ಕೆದೂರು, ಉಮೇಶ್ ಶೆಟ್ಟಿ ಶಾನ್ಕಟ್ಟು, ಸಂಪಿಗೇಡಿ ಸಂಜೀವ್ ಶೆಟ್ಟಿ, ಕೃಷ್ಣದೇವ ಕಾರಂತ್ ಕೋಣಿ, ಪ್ರದೀಪ್‌ಕುಮಾರ ಶೆಟ್ಟಿ ಕಾವ್ರಾಡಿ, ವಿಕಾಸ ಹೆಗ್ಡೆ, ವಸುಂಧರ ಹೆಗ್ಡೆ ಹೆಂಗವಳ್ಳಿ, ಬಲಾಡಿ ಸಂತೋಷ್ ಶೆಟ್ಟಿ, ದೇವಾನಂದ ಶೆಟ್ಟಿ ಬಸ್ರೂರು, ಉದಯ್‌ಕುಮಾರ ಶೆಟ್ಟಿ ಅಡ್ಕೆಕೊಡ್ಲು, ಕೆ.ಶ್ಯಾಮ ಕಾವ್ರಾಡಿ, ಶಿವಲಿಂಗಯ್ಯ ಮೊಳಹಳ್ಳಿ, ತಿಮ್ಮಪ್ಪ ಪೂಜಾರಿ ಮುಂತಾದವರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು.

ಎಸ್.ದಿನಕರ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ ಬಿದ್ಕಲ್‌ಕಟ್ಟೆ, ವಂಡಬಳ್ಳಿ ಜಯರಾಮ ಶೆಟ್ಟಿ, ಮೋಹನ್‌ದಾಸ್ ಶೆಟ್ಟಿ ಮಲ್ಯಾಡಿ, ಸುಧಾಕರ ಶೆಟ್ಟಿ ಆವರ್ಸೆ, ಗಣಪಯ್ಯ ಶೆಟ್ಟಿ ಅಂಪಾರು, ಪ್ರಸನ್ನಕುಮಾರ ಶೆಟ್ಟಿ ಚೋರಾಡಿ, ಅಶೋಕ್ ಶೆಟ್ಟಿ ಚೋರಾಡಿ, ಬುದ್ದರಾಜ್ ಶೆಟ್ಟಿ ಮಾರ್ಕೂಡು, ದೀಪಕ್ ಶೆಟ್ಟಿ ಕಾಳಾವರ, ಸೀತಾರಾಮ ಶೆಟ್ಟಿ ಮಲ್ಯಾಡಿ, ರಾಮಕೃಷ್ಣ ಭಟ್ ಮುಂತಾದವರು ಇದ್ದರು.

ಜಿಲ್ಲಾ ರೈತ ಸಂಘದ ವಿಕಾಸ್ ಹೆಗ್ಡೆ ಬಸ್ರೂರು ಸ್ವಾಗತಿಸಿದರು, ಹರಿಪ್ರಸಾದ್ ಶೆಟ್ಟಿ ಕಾಸನಮಕ್ಕಿ ವಂದಿಸಿದರು

Exit mobile version