Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲೆಯ ಸರಕಾರಿ, ಖಾಸಗಿ ಆಸ್ಪತ್ರೆಗಳ ಐಸಿಯು ಬೆಡ್‌ಗಳನ್ನು ಹೆಚ್ಚಿಸಲು ಕ್ರಮ: ಉಡುಪಿ ಡಿಸಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯ ಕಾರಣದಿಂದ ದಿನೇ ದಿನೇ ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಮುಂಜಾಗ್ರತೆಯಾಗಿ ಜಿಲ್ಲೆಯ ಸರಕಾರಿ ಮತು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಗಳ ಸಂಖ್ಯೆಯ ಹೆಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.

ಅವರು ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ವೈದ್ಯಕೀಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದರೂ ಕೂಡಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತೊಂದರೆಯಾಗದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರಸ್ತುತ ಇರುವ ಐಸಿಯು ಬೆಡ್ ಗಳಗಿಂತಲೂ ಇನ್ನೂ ಹೆಚ್ಚಿನ ಸಂಖ್ಯೆಯ ಐಸಿಯು ಬೆಡ್ ಗಳನ್ನು ಸಿದ್ದಮಾಡಲು
ಸಾಧ್ಯತೆಗಳಿದ್ದಲ್ಲಿ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ, ಬೆಡ್ ಮೇನಜ್ ಮೆಂಟ್ ಸಿಸ್ಟಂ ನಲ್ಲಿ ಪ್ರತೀ ದಿನ ಆಸ್ಪತ್ರೆಗೆ ದಾಖಲಾಗುವ ಮತ್ತು ಬಿಡುಗಡೆಯಾಗುವ ರೋಗಿಗಳ ವಿವರಗಳನ್ನು ದಾಖಲಿಸಿ, ಲಭ್ಯವಿರುವ ಬೆಡ್ ಗಳ ಸಂಖ್ಯೆಯನ್ನು ಪ್ರತೀ ದಿನ ನಿಖರವಾಗಿ ನಮೂದಿಸಲು ಅನುಕೂಲವಾಗಲು ಖಾಸಗಿ ಆಸ್ಪತ್ರೆಗಳು ತಪ್ಪದೆ ಮಾಹಿತಿ ನೀಢಬೇಕು , ಇದರಿಂದ ಬೆಡ್‌ಗಳ ಸಮಸ್ಯೆ ಕಂಡುಬರದಂತೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ಕೋವಿಡ್ ಸೋಂಕಿತನ್ನು ಸೂಕ್ತ ರೀತಿಯಲ್ಲಿ ಪರೀಕ್ಷಿಸಿ ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಿ, ಸೋಂಕು ತೀವ್ರವಾಗಿಲ್ಲದೇ ಹೋಂ ಐಸೋಲೇಶನ್ ಅಗತ್ಯವಿರುವ ಸೋಂಕಿತರನ್ನು ಅನಗತ್ಯವಾಗಿ ದಾಖಲು ಮಾಡಬೇಡಿ , ಒಂದು ಆಸ್ಪತ್ರೆಯಿಂಧ ಮತ್ತೊಂದು ಆಸ್ಪತ್ರೆಗೆ ಸೋಂಕಿತರನ್ನು ವರ್ಗಾಯಿಸುವಾಗ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿ, ರೋಗಿಯ ಸಂಪೂರ್ಣ ವಿವರಗಳನ್ನು ದಾಖಲಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ನೀಡುವ ಆಕ್ಸಿಜಿನ್ ಪೋಲಾಗದಂತೆ ಎಚ್ಚರವಹಿಸಿ, ಈ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡಿ, ರೋಗಿಗಳಿಗೆ ಅಗತ್ಯ ಪ್ರಮಾಣದಲ್ಲಿ ಆಕ್ಸಿಜಿನ್ ನೀಡುವ ಕುರಿತು ಮಾಹಿತಿ ನೀಡಿ, ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆಕ್ಸಿಜನ್ ನೀಡುವುದು, ಆಕ್ಸಿಜಿನ್ ಸೋರಿಕೆಯನ್ನು ತಡೆಗಟ್ಟಿ. ಪ್ರಸ್ತುತ ಜಿಲ್ಲೆಯಲ್ಲಿ ಆಕ್ಸಿಜಿನ್ ಕೊರತೆ ಇಲ್ಲ. ರೆಮಿಡಿಸಿವರ್ ನ್ನು ಸಹ ಅವಶ್ಯವಿದ್ದ ರೋಗಿಗಳಿಗೆ ಮಾತ್ರ ನೀಡಿ ಎಂದು ಡಿಸಿ ಸೂಚಿಸಿದರು.

ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 6 ಮಂದಿ ಕೋವಿಡ್ ನಿಂದ ಸಾವನಪ್ಪಿದ್ದು, ರಾಜ್ಯದಲ್ಲಿ ಬೆಂಗಳೂರು ನಂತರ ಪ್ರತೀ ಮಿಲಿಯನ್ ಗೆ ಅತೀ ಹೆಚ್ಚು ಕೋವಿಡ್ ಪರೀಕ್ಷೆ ನಡೆಸುತ್ತಿರುವ ಜಿಲ್ಲೆ ಉಡುಪಿಯಾಗಿದೆ. ಸಾರ್ವಜನಿಕರು ಕೋವಿಡ್ ನಿಯಂತ್ರಣ ಕುರಿತಂತೆ ಸರ್ಕಾರ ಸೂಚಿಸಿರುವ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜಿಲ್ಲೆಯಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಡಿಸಿ ಜಿ.ಜಗದೀಶ್ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಡಾ.ಮಧುಸೂದನ್ ನಾಯಕ್, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಹಾಗೂ ಎಕ್ಸ್ಪರ್ಟ್ ಕಮಿಟಿಯ ವೈದ್ಯರುಗಳು ಉಪಸ್ಥಿತರಿದ್ದರು.

Exit mobile version