Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ ಗ್ರಾಮ ಪಂಚಾಯತ್‌ನಲ್ಲಿ ಕೋವಿಡ್ ಕಾರ್ಯಪಡೆ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ-19ರ ಎರಡನೆ ಅಲೆ, ಗ್ರಾಮೀಣ ಪ್ರದೇಶಗಳನ್ನೂ ವ್ಯಾಪಿಸಬಹುದು. ಈ ಹಂತದಲ್ಲಿ ಗ್ರಾಮಾಡಳಿತ ಅದನ್ನು ತಡೆಯುವ ನಿಟ್ಟಿನಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಹಾಗೂ ಜನಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಹೇಳಿದರು.

ಅವರು ಮರವಂತೆ ಗ್ರಾಮ ಪಂಚಾಯತಿ ಕೋವಿಡ್ ಕಾರ್ಯಪಡೆ ರಚನೆಯ ಬಳಿಕ ನಡೆದ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು.

ಈ ಹಂತದಲ್ಲಿ ಎಲ್ಲರೂ ಕರ್ಫ್ಯೂ ನಿರ್ಬಂಧಗಳನ್ನು ಮತ್ತು ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ್ ಖಾರ್ವಿ, ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ, ಗ್ರಾಮ ಕರಣಿಕ ಸಂದೀಪ್, ಅಂಗನವಾಡಿ ಮೇಲ್ವಿಚಾರಕಿ ನಿವೇದಿತಾ, ಬೀಟ್ ಪಿಸಿ ಚಂದ್ರ, ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಗ್ರಂಥಾಲಯ ಮೇಲ್ವಿಚಾರಕಿ ಶ್ಯಾಮಲಾ, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿ ಅನಿತಾ ಆರ್. ಕೆ, ಸ್ತ್ರೀಶಕ್ತಿ ಸಂಘಗಳ ಪ್ರತಿನಿಧಿ ಲತಾ, ಸ್ವಯಂಸೇವಕ ಆನಂದ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಎಲ್ಲ ಎ.ಎನ್.ಎಂ. ಮತ್ತು ಆಶಾ ಕಾರ್ಯಕರ್ತರು, ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಇರುವ ಕಾರ್ಯಪಡೆಯನ್ನು ರಚಿಸಲಾಯಿತು. ತಳಮಟ್ಟದಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ. ವಿನಾಯಕ ರಾವ್, ಸುಧಾಕರ ಆಚಾರ್ಯ, ನಾಗರಾಜ ಖಾರ್ವಿ, ಕಿಶನ್‌ಕುಮಾರ್, ರುಕ್ಮಿಣಿ, ಲೋಕೇಶ್ ಖಾರ್ವಿ ನೇತೃತ್ವದಲ್ಲಿ ತಲಾ 7 ಸದಸ್ಯರಿರುವ 6 ಕಾರ್ಯತಂಡಗಳನ್ನು ರಚಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮ್ಮದ್ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ ಶೇರುಗಾರ್ ವಂದಿಸಿದರು. ಸಿಬ್ಬಂದಿ ಶೇಖರ್ ಮರವಂತೆ ನಿರೂಪಿಸಿದರು.

Exit mobile version