ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾರಾಪತಿ, ಅಳ್ವೆಕೋಡಿ, ಬೆಸ್ಕೂರು, ಸುಬ್ಬರಾಡಿ ಭಾಗದ ಸುಮಾರು 350 ಮನೆಗಳಿಗೆ ಮಳೆಗಾಲ ಆರಂಭದ ತನಕ ಉಚಿತ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್ ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಮುದ್ರ ತಟದ ಬೆಸ್ಕೂರಿನಿಂದ ತಾರಾಪತಿಯ ತನಕ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಅಗತ್ಯವಿದ್ದು, ಪಂಚಾಯತ್ ಮೂಲಕ ಮಾಡುವ ಕಾರ್ಯವನ್ನು ಟ್ರಸ್ಟ್ ಸ್ವಇಚ್ಛೆಯಿಂದ ಪೂರೈಸುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಕಾರ್ಯವಾಗಿದೆ. ಟ್ರಸ್ಟ್‌ನ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಅವರ ಕಾರ್ಯಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದಿಸಲಾಗುವುದು ಎಂದರು.
ಈ ಸಂದರ್ಭ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಮಾತನಾಡಿ ಕಳೆದ ಭಾರಿ ಬಿಜೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾದಾಗ ಟ್ರಸ್ಟ್ ವತಿಯಿಂದ ಉಚಿತವಾಗಿ ನೀರು ಸರಬರಾಜು ಮಾಡಲಾಗಿತ್ತು. ಈ ಬೆಸಿಗೆಯಲ್ಲಿ ಮಳೆಯಾಗಿದ್ದರಿಂದ ಅಲ್ಲಿ ಅತಿ ಅಗತ್ಯ ಇರುವಲ್ಲಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಅಳ್ವೆಕೋಡಿ, ತಾರಾಪತಿ, ಬೆಸ್ಕೂರು ಭಾಗಕ್ಕೆ ಹೆಚ್ಚಿನ ಅಗತ್ಯ ಕಂಡುಬಂದ ಹಿನ್ನೆಲೆಯಲ್ಲಿ, ಗ್ರಾಮಸ್ಥರ ಮನವಿಯ ಮೇರೆಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಉದ್ಯಮಿ ಗುರುರಾಜ ಪಂಜು ಪೂಜಾರಿ, ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಪೂಜಾರಿ, ಶ್ರೀ ರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಮಾಧವ ಖಾರ್ವಿ, ಅಧ್ಯಕ್ಷರಾದ ರವೀಂದ್ರ ಖಾರ್ವಿ, ಸ್ಥಳೀಯರಾದ ಸುರೇಶ್ ದೇವಾಡಿಗ, ನಾಗೇಶ್ ಖಾರ್ವಿ, ವೀರಭದ್ರ ಖಾರ್ವಿ, ಪ್ರಸಾದ್ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾರಾಪತಿ, ಅಳ್ವೆಕೋಡಿ, ಬೆಸ್ಕೂರು, ಸುಬ್ಬರಾಡಿ ಭಾಗದ ಸುಮಾರು 350 ಮನೆಗಳಿಗೆ ಪ್ರತಿನಿತ್ಯ ಎರಡು ಪ್ರತ್ಯೇಕ ವಾಹನಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.