Kundapra.com ಕುಂದಾಪ್ರ ಡಾಟ್ ಕಾಂ

ಸರಕಾರಿ ಆಸ್ಪತ್ರೆಗಳ ಮೂಲಭೂತ ಸೌಕರ್ಯ & ಸಿಬ್ಬಂದಿ ಕೊರತೆ ನಿವಾರಿಸಿ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು, ಕಿರಿಮಂಜೇಶ್ವರ, ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಶುಕ್ರವಾರ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಭೇಟಿ ನೀಡಿ ಆಸ್ಪತ್ರೆಗಳ ಸ್ಥಿತಿ, ಬಾಕಿ ಇರುವ ವಾಕ್ಸಿನೇಷನ್ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ವೈದಾಧಿಕಾರಿಗಳಿಂದ ಪಡೆದುಕೊಂಡದರು.

ಈ ವೇಳೆ ಅವರು ಮಾತನಾಡಿ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ದು ಕೋವಿಡ್ ನಿಯಂತ್ರಣಕ್ಕಾಗಿ ಸರಕಾರದ ನಿರ್ದೇಶನಗಳನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲರ್ಯಗಳ ಕೊರತೆ ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ ಅವರ ಮೇಲೆ ಒತ್ತಡ ಹೆಚ್ಚಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಎದುರಿಸಲು ಸಾಕಷ್ಟು ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಬೈಂದೂರು ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇದ್ದು ಇದನ್ನು ನಿವಾರಿಸುವ ಜೊತೆಗೆ ಮೂರನೇ ಅಲೆಯನ್ನು ಎದುರಿಸುವ ಸಲುವಾಗಿ ಬೈಂದೂರು ತಾಲೂಕಿಗೆ ಪ್ರತ್ಯೇಕವಾದ ಕೋವಿಡ್ ಆಸ್ಪತ್ರೆಯನ್ನು ಸಿದ್ಧಪಡಿಸಿಕೊಳ್ಳುವ ಅವಶ್ಯಕತೆ ಇದ್ದು, ಜಿಲ್ಲಾಡಳಿತ ಈ ಬಗ್ಗೆ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಆಗ್ರಹಿಸಿದರು. ಬೈಂದೂರು ಕ್ಷೇತ್ರದ ಇತರೆ ಆಸ್ಪತ್ರೆಗಳಿಗೆ ಭೇಟಿ ನೀಡಿದ ಬಳಿಕ ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಭೇಟಿ ನೀಡಿ ಈ ಬಗ್ಗೆ ಒತ್ತಾಯಿಸುವುದಾಗಿ ಅವರು ತಿಳಿಸಿದರು.

ಶಿರೂರು, ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಭಾರಿ ವಿವಿಧ ದಾನಿಗಳು ನೆರವು ನೀಡಿದ್ದು ತಾತ್ಕಾಲಿಕವಾಗಿ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯವಾಗಿದೆ ಎಂದ ಅವರು, ಸಾಕಷ್ಟು ಜನರಿಗೆ ಎರಡನೇ ಡೋಸ್ ವ್ಯಾಕ್ಸಿನ್ ನೀಡುವುದು ಬಾಕಿಯಿದ್ದು ಸರಕಾರ ಶೀಘ್ರವೇ ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

ಈ ಸಂದರ್ಭ ಶಿರೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸಹನಾ, ಬೈಂದೂರು ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಂದಿನಿ, ಕಿರಿಮಂಜೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಿಶಾ ರೆಬೆಲ್ಲೊ, ಮರವಂತೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಉಪ್ಪುಂದ, ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಶಿರೂರು ಗ್ರಾಪಂ ಅಧ್ಯಕ್ಷೆ ದಿಶ್‌ಶಾದ್ ಬೇಗಂ, ಪಕ್ಷದ ಪ್ರಮುಖರಾದ ಈಶ್ವರ ದೇವಾಡಿಗ, ವಿನಾಯಕ್ ರಾವ್, ಶೇಖರ ಪೂಜಾರಿ ಉಪ್ಪುಂದ, ಗಣೇಶ್ ಪೂಜಾರಿ ಮೊದಲಾದವರು ಇದ್ದರು.

ಇದನ್ನೂ ಓದಿ
► ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೈಂದೂರು ಶಾಸಕರ ಭೇಟಿ – https://kundapraa.com/?p=48067

Exit mobile version