Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ಜನರು ಕೋವಿಡ್ ನಿರ್ಲಕ್ಷಿಸಿ ಊರೆಲ್ಲಾ ಸುತ್ತಾಡುತ್ತಿದ್ದಾರೆ. ಕರೋನಾ ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿಕರು ಹೊರಗಡೆ ತಿರುಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಕರೋನಾ ಇನ್ನೂ ಹೆಚ್ಚು ಹರಡದಂತೆ ತಡೆಯುವ ಉದ್ದೇಶದಿಂದ ಕರೋನಾ ಕೇಸ್‌ಗಳು ಹೆಚ್ಚಾಗಿರುವ ಪರಿಸರದಲ್ಲಿನ ಜನರ ಕೋವಿಡ್ ಪರೀಕ್ಷೆ ಮಾಡಲಾಗುವುದು. ಕೋವಿಡ್ ಲಕ್ಷಣ ಇದ್ದವರು ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ ಹೇಳಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ಜರಗಿದ ಗಂಗೊಳ್ಳಿ ಗ್ರಾಮ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಸೋಂಕಿತರು ಹಾಗೂ ಪ್ರಾಥಮಿಕ ಸಂಪರ್ಕಿತರು ಹೊರಗಡೆ ತಿರುಗಾಡಿದರೆ ಪ್ರಕರಣ ದಾಖಲಿಸಲಾಗುವುದು. ಗಂಗೊಳ್ಳಿಯಲ್ಲಿ ಬೆಳಗಿನ ಸಮಯದಲ್ಲಿ ಜನರ ಹಾಗೂ ವಾಹನ ಸಂಚಾರಕ್ಕೆ ಕಡಿವಾಣ ಹಾಕಲು ಪೊಲೀಸ್ ಗಸ್ತು ಹೆಚ್ಚಿಸಬೇಕು. ಅಂಗಡಿ, ಮೀನು ಮಾರುಕಟ್ಟೆ ಮುಂತಾದೆಡೆ ಜನರು ಗುಂಪು ಸೇರದಂತೆ ಅಗತ್ಯ ಕ್ರಮಕೈಗೊಳ್ಳಬೇಕು. ವಾಹನ ಚಾಲಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕರೋನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮುನ್ನೆಚ್ಚರಿಕೆ ವಹಿಸಲು ಕ್ರಮಕೈಗೊಳ್ಳಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಪಿಡಿಒ ಉಮಾಶಂಕರ, ಸಮಿತಿ ಸದಸ್ಯ ಬಿ.ರಾಘವೇಂದ್ರ ಪೈ, ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್, ಕಿರಿಯ ಆರೋಗ್ಯ ಸಹಾಯಕಿ ಪ್ರಜ್ವಲಾ, ಆಶಾ ಕಾರ್ಯಕರ್ತೆ ಕಲ್ಪನಾ, ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ರಮೇಶ್, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ನಾರಾಯಣ ಶ್ಯಾನುಭಾಗ್ ಸ್ವಾಗತಿಸಿ ವಂದಿಸಿದರು.

Exit mobile version