Kundapra.com ಕುಂದಾಪ್ರ ಡಾಟ್ ಕಾಂ

ನೈತಿಕ ಮೌಲ್ಯಗಳ ಮೂಲಕ ವಿದ್ಯಾರ್ಥಿಗಳ ಪರಿವರ್ತನೆ

ಕುಂದಾಪುರ: ಸಮಾಜದಲ್ಲಿ ಅಘಾತಕಾರಿ ಘಟನೆಗಳಿಗೆ ಕಾರಣರಾಗುವ ಕೆಟ್ಟ ಮನಸ್ಸುಗಳ ನಿಯಂತ್ರಣ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸಮುದಾಯದ ಪಾತ್ರವೂ ಇಲ್ಲಿದೆ. ಮಾನಸಿಕ ಪರಿವರ್ತನೆ, ನೈತಿಕ ಮೌಲ್ಯಗಳನ್ನು ಮನಸ್ಸಿನಲ್ಲಿ ತುಂಬುವುದರಿಂದ  ಬದಲಾವಣೆ ಸಾಧ್ಯವಿದೆ. ಇವತ್ತು ಅಪರಾಧ ಕೃತ್ಯ ಎಸಗುವ ವ್ಯಕ್ತಿ ಅವಿದ್ಯಾವಂತನಲ್ಲ. ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇವತ್ತು ಸಮಾಜದ ಮಾನಸಿಕ ಸ್ಥಿತಿಯನ್ನು ಸರಿಪಡಿಸುವ ಕೆಲಸವೂ ಆಗಬೇಕಿದೆ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಗಂಗೊಳ್ಳಿಯ ವಿಜಯ ವಿಠಲ ಮಂಟಪದಲ್ಲಿ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾದ ದಿ.ಅಕ್ಷತಾ ದೇವಾಡಿಗ ಮತು ದಿ.ರತ್ನಾ ಕೊಠಾರಿ ಸ್ಮರಣಾರ್ಥ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳ ಮನಸ್ಸಿನಲ್ಲಿ ಜಾತಿ, ಧರ್ಮದ ಬೇಲಿ ಹಾಕಬಾರದು. ದೇಶದ ಏಕತೆ, ಸಮಗ್ರತೆಯ ಅರಿವನ್ನು ಮೂಡಿಸಬೇಕು. ಕಾನೂನು ಕಾಯ್ದೆಗಳಿಂದ ಆಗದ ಕಾರ್ಯ ನೈತಿಕ ಮೌಲ್ಯಗಳನ್ನು ಮನಸ್ಸಿನಲ್ಲಿ ತುಂಬುವುದರಿಂದ ಸಾಧ್ಯವಿದೆ. ಆ ನೆಲೆಯಲ್ಲಿ ಪಠ್ಯ ಪುಸ್ತಕದಲ್ಲಿ ನೈತಿಕ ಮೌಲ್ಯಗಳಿಗೆ ಒತ್ತು ನೀಡಿ, ಪಠ್ಯ ಪುಸ್ತಕಗಳ ಪರಿಷ್ಕಾರ ನಡೆಸಲಾಗುವುದು ಎಂದರು.

ದುರ್ಘಟನೆಗಳು ಘಟಿಸಿದಾಗ ಅಪರಾಧಿಯ ಜಾತಿಧರ್ಮದ ಹಿಂದೆ ಹೋಗಬಾರದು. ಅಪರಾಧಿಗೆ ಶಿಕ್ಷೆ ಆಗಬೇಕು. ಹಾಗಂತ ಆತನ ಜಾತಿಯನ್ನು ಎಳೆದು ತರುವುದು ಸರಿಯಲ್ಲ. ವಿದ್ಯಾರ್ಥಿಗಳು ಉತ್ತಮ ಮೌಲ್ಯ ಇರುವ ಪುಸ್ತಕಗಳನ್ನು ಓದಬೇಕು. ಜಾಗೃತಿ ಬೆಳೆಸಿಕೊಳ್ಳಬೇಕು. ಸರ್ಕಾರ ಕೂಡಾ ವಿದ್ಯಾರ್ಥಿನಿಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಸಂಬಂಧಪಟ್ಟ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಕೂಡಾ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದರು.

ಲೈಂಗಿಕ ಕಿರುಕುಳ ಮೊದಲಾದ ಅಪರಾಧ ಕೃತ್ಯಗಳ ಮಟ್ಟ ಹಾಕಲು ಪೋಕ್ಸೊ ಕಾಯಿದೆ ಇದೆ. ಇದು ಹೆಚ್ಚು ಪರಿಣಾಮಕಾರಿಯಾದ ಕಾಯ್ದೆಯಾಗಿದೆ. ಮಹಿಳಾ ಸುರಕ್ಷತೆಗೂ ಕೂಡಾ ಹೆಚ್ಚು ಒತ್ತು ನೀಡಲಾಗಿದೆ. ಮಹಿಳಾ ದೌರ್ಜನ್ಯಕ್ಕೆ ಸಂಬಂಧಪಟ್ಟಂತೆ ೯೦% ಕ್ಕೂ ಹೆಚ್ಚು ಅಪರಾಧಿಗಳ ಬಂಧನವಾಗಿದೆ. ಮತ್ತೆ ಘಟನೆಗಳು ಪುನರಾವರ್ತನೆ ಆಗದಂತೆ ಮುಂಜಾಗರೂಕ ಕ್ರಮಗಳನ್ನು ತಗೆದುಕೊಳ್ಳಲಾಗಿದೆ ಎಂದರು.

ಉಡುಪಿ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಗೋಪಾಲ ಪೂಜಾರಿ, ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ, ಡಿ.ಡಿ.ಪಿ.ಐ ಹೆಚ್. ದಿವಾಕರ ಶೆಟ್ಟಿ, ಆಯನೂರು ವಾತ್ಸಲ್ಯ ಸ್ಕೂಲ್ ಫಾರ್ ಎಕ್ಸಲೆನ್ಸ್ ಸಂಚಾಲಕ ಆದರ್ಶ ಹುಂಚದಕಟ್ಟೆ, ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಎಸೋಸಿಯೇಶನ್ ಅಧ್ಯಕ್ಷ ಡಾ|ಕಾಶಿನಾಥ ಪಿ.ಪೈ, ಡಿ.ಡಿ.ಪಿ.ಯು ಆರ್.ಬಿ.ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಭಾಸ್ಕರ ಖಾರ್ವಿ ಸ್ವಾಗತಿಸಿ, ಗೌರವಾಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ರಾಮಚಂದ್ರ ಖಾರ್ವಿ, ಪ್ರಧಾನ ಕಾರ್ಯದರ್ಶಿ ಜಯರಾಮ ದೇವಾಡಿಗ, ಕೋಶಾದಿಕಾರಿ ಮಾಧವ ಖಾರ್ವಿ ಉಪಸ್ಥಿತರಿದ್ದರು.

Exit mobile version