Kundapra.com ಕುಂದಾಪ್ರ ಡಾಟ್ ಕಾಂ

ಲಾಕ್‌ಡೌನ್ ಅವಧಿಯಲ್ಲಿ ಬೆಳಿಗ್ಗೆ 6-10 ಬೇಕರಿ ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಿ, ಮನವಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಲಾಕ್‌ಡೌನ್‌ನಿಂದ ಇತರ ವಲಯಗಳಂತೆ ಬೇಕರಿ ಉತ್ಪನ್ನ ಮಾರಾಟಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲು ಬೇಕರಿಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಸು ತಯಾರಿಕಾ ಹಾಗೂ ಮಾರಾಟ ಸಂಘವು ಉಡುಪಿ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದೆ.

ಜಿಲ್ಲೆಯಲ್ಲಿ 1,500ಕ್ಕೂ ಅಧಿಕ ಬೇಕರಿ ಉತ್ಪನ್ನ ಮಾರಾಟ ಮಾಡುವ ಅಂಗಡಿಗಳಿವೆ. ಹಾಗೆ, ಸುಮಾರು 75ಕ್ಕೂ ಹೆಚ್ಚು ಬೇಕರಿ ಉತ್ಪನ್ನಗಳನ್ನು ಉತ್ಪಾದಿಸುವ ಘಟಕಗಳಿದ್ದು, 15,000 ಕ್ಕೂ ಅಧಿಕ ಕಾರ್ಮಿಕರು ಇದನ್ನೆ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಲಾಕ್ಡೌನ್ ಅವಧಿಯಲ್ಲಿ ದಿನಸಿ ಸಾಮಗ್ರಿ ಖರೀದಿಗೆ ನೀಡಿರುವ ನಿಗದಿ ಅವಧಿಯಲ್ಲಿ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಸಂಘ ಒತ್ತಾಯಿಸಿದೆ.

ಜನರಿಗೆ ದಿನಸಿ ವಸ್ತುಗಳಂತೆ ಬ್ರೆಡ್, ಬನ್, ಬಟರ್, ರಸ್ಕ್ ಮುಂತಾದ ಬೇಕರಿ ಉತ್ಪನ್ನಗಳು ಅವಶ್ಯಕವಾಗಿದೆ. ಆಸ್ಪತ್ರೆಗಳಲ್ಲೂ ರೋಗಿಗಳಿಗೆ ಬ್ರೆಡ್, ಬನ್ ನೀಡಲಾಗುತ್ತದೆ. ಆದರೆ, ಬೇಕರಿ ಉತ್ಪನ್ನ ತಯಾರಿಕೆಗೆ ಅನುಮತಿ ನೀಡಿದ್ದು, ಅದನ್ನು ಮಾರಾಟ ಮಾಡಲು ತರಕಾರಿ, ದಿನಸಿ ಅಂಗಡಿ ಆಶ್ರಯಿಸಬೇಕಾಗಿದೆ. ಆದರೆ ದಿನಸಿ ಅಂಗಡಿಗಳಲ್ಲಿ ಗ್ರಾಹಕರಿಗೆ ಬೇಕರಿ ಉತ್ಪನ್ನಗಳನ್ನು ಪಡೆಯಲು ಕಷ್ಟಕರವಾಗುತ್ತಿದ್ದು, ಹೀಗಾಗಿ ನಿಗದಿತ ಸಮಯದಲ್ಲಿ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಸಂಘ ವಿನಂತಿಸಿದೆ.

ಈ ಸಂದರ್ಭದಲ್ಲಿ ಸಂಘದ ಕಾನೂನು ಸಲಹೆಗಾರರದ ಶ್ರೀಧರ್ ಪಿ.ಎಸ್. ಮತ್ತು ಕಾರ್ಯದರ್ಶಿ ವಿಶ್ವನಾಥ್ ಕುಲಾಲ್, ಕೋಶಾಧಿಕಾರಿ ಸತ್ಯಪ್ರಸಾದ್ ಶೆಣೈ, ಸದಸ್ಯರುಗಳಾದ ಮಣಿಪಾಲ ಬೇಕರಿ, ಅಮಿತ್ ಬೇಕರಿ, ಉಡುಪಿ ವಸಂತ್ ಬೇಕರಿ, ಸುದರ್ಶನ್ ಬೇಕರಿ ಉಡುಪಿ, ಬ್ರಹ್ಮಾವರ ವೆಂಕಟೇಶ್ ಸ್ವೀಟ್ಸ್, ಕುಂದಾಪುರ ವಸಂತ ಬೇಕರಿ, ಪ್ರಭು ಬೇಕರಿ ಕುಂದಾಪುರ ಇದರ ಮಾಲೀಕರು ಉಪಸ್ಥಿತರಿದ್ದರು.

Exit mobile version