Kundapra.com ಕುಂದಾಪ್ರ ಡಾಟ್ ಕಾಂ

ಗ್ರಾಮೀಣ ಭಾಗದ ಕೋವಿಡ್ ಸೊಂಕಿತರ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಉಡುಪಿ ಡಿಸಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿರೂರು ಗ್ರಾಮದ ನಾಗಿನಗದ್ದೆ, ಕೋಟೆಮನೆ ಮುಂತಾದ ಪ್ರದೇಶಗಳ ಕೊರೋನಾ ಸೊಂಕಿತರ ಮನೆಗಳಿಗೆ ಶನಿವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಕುಟುಂಬಿಕರಿಗೆ ಧೈರ್ಯ ತುಂಬಿದರು. ಶಿರೂರು ಗ್ರಾಮದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಮಾಡಿಕೊಳ್ಳಲಾದ ಸಿದ್ಧತೆಯನ್ನು ಪರಿಶೀಲಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿನ ಸಿದ್ದತೆ ಪರಿಶೀಲನೆ ಮತ್ತು ಧೈರ್ಯ ತುಂಬಲು ಖುದ್ದು ಮನೆಗಳಿಗೆ ಭೇಟಿ ನೀಡಲಾಗಿದೆ. ಈಗಾಗಲೇ ಜಿಲ್ಲಾಡಳಿತ ಕೊರೋನಾ ಕುರಿತಂತೆ ಪೂರ್ಣ ಸಿದ್ದತೆ ಮಾಡಿಕೊಂಡಿದೆ. ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಚಿಕಿತ್ಸೆ ತಕ್ಷಣದಲ್ಲಿ ದೊರೆಯಲಿದೆ. ಜನರು ಆತಂಕಪಡುವಂತ ಅವಶ್ಯಕತೆಯಿಲ್ಲ. ಬ್ಲ್ಯಾಕ್ ಫಂಗಸ್ ಬಗ್ಗೆ ಭಯಪಡುವಂತ ಅವಶ್ಯಕತೆಯಿಲ್ಲ. ಕೊರೋನಾ ಸೋಂಕಿತರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದು ಉಸಿರಾಟದ ತೊಂದರೆಯಿದ್ದಲ್ಲಿ ತಕ್ಷಣ ಮಾಹಿತಿ ನೀಡಬೇಕು. ಅನಗತ್ಯ ಸಂಚಾರ ಮಾಡಬಾರದು ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ರಾಜು ಕೆ., ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಹೆಚ್. ಎಸ್., ಶಿರೂರು ಪಿ.ಡಿ.ಓ ಮಂಜುನಾಥ ಶೆಟ್ಟಿ, ಕಂದಾಯ ನಿರೀಕ್ಷಕ ಮಂಜು, ಯಡ್ತರೆ ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ ಬಿಲ್ಲವ, ಶಿರೂರು ಗ್ರಾಮ ಲೆಕ್ಕಾಧಿಕಾರಿ ಸತೀಶ ಹೋಬಳಿದಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಬೈಂದೂರು ಭಾಗದ ಅಂಗಡಿ, ಕ್ಲಿನಿಕ್’ಗೆ ಭೇಟಿ:
ಬೈಂದೂರು ಪಟ್ಟಣದ ಅಗತ್ಯ ವಸ್ತುಗಳ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ವ್ಯವಹಾರ ನಡೆಸುವಂತೆ ಸೂಚಿಸಿದರು. ಬೈಂದೂರಿನ ಕ್ಲಿನಿಕಿನಲ್ಲಿ ಸಾಮಾಜಿಕ ಅಂತರ ಇಲ್ಲದಿರುವುದನ್ನು ಗಮನಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಚಿಕಿತ್ಸೆಗೆ ಭೇಟಿ ನೀಡುವ ರೋಗಿಗಳ ವಿವರ ದಾಖಲಿಸಿಕೊಳ್ಳಲು ಮತ್ತು ಸರಕಾರಿ ಆಸ್ಪತ್ರೆಗೆ ರೆಫರ್ ಮಾಡಿದ್ದನ್ನು ದಾಖಲಿಸಿಕೊಳ್ಳಲು ಅವರು ಸೂಚಿಸಿದರು. ಇದೇ ಸಂದರ್ಭ ಬೈಂದೂರು ರಸ್ತೆ ಬದಿಯ ಅಂಗಡಿಯಲ್ಲಿದ್ದ ಹಲಸಿನ ಹಣ್ಣು ಖರೀಸಿದರು.

 

Exit mobile version