Kundapra.com ಕುಂದಾಪ್ರ ಡಾಟ್ ಕಾಂ

ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬೆಡ್‌ಗಳನ್ನು ಮೀಸಲಿಡಿ: ಉಸ್ತುವಾರಿ ಸಚಿವ ಬೊಮ್ಮಾಯಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ರೋಗಕ್ಕೆ ಚಿಕಿತ್ಸೆ ನೀಡಲು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್‌ಗಳನ್ನು ಮೀಸಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಅವರು ಬೆಂಗಳೂರಿನ ವಿಕಾಸಸೌಧದಿಂದ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ರೋಗದಿಂದ ಒಬ್ಬರು ಮೃತಪಟ್ಟಿದ್ದು, ಒಂದು ರೋಗಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ಗೆ ರವಾನಿಸಲಾಗಿದೆ. ಜಿಲ್ಲೆಯಲ್ಲಿಯೇ ಬ್ಲಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ 10 ಹಾಸಿಗೆಯ ಕೊಠಡಿಯನ್ನು ಕೂಡಲೇ ಸಿದ್ಧಪಡಿಸುವಂತೆ ಸೂಚನೆ ನೀಡಿದ ಸಚಿವರು, ಬ್ಲಾಕ್ ಫಂಗಸ್ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಶೀಘ್ರದಲ್ಲಿಯೇ ಜಿಲ್ಲೆಗೆ ಸರಬರಾಜು ಮಾಡಲಾಗುವುದು. ಜಿಲ್ಲೆಗೆ ಹೊರಜಿಲ್ಲೆಗಳಿಂದಲೂ ಬ್ಲಾಕ್ ಫಂಗಸ್ ಚಿಕಿತ್ಸೆಗೆ ರೋಗಿಗಳು ಆಗಮಿಸುತ್ತಿದ್ದು, ಹೆಚ್ಚಿನ ಔಷಧಿಯನ್ನು ಸರಬರಾಜು ಮಾಡಲಾಗುವುದು ಎಂದರು.

ಕೋವಿಡ್ ಚಿಕಿತ್ಸೆಗೆ ದಾಖಲಾಗುವ ಎಲ್ಲಾ ರೋಗಿಗಳಿಗೆ ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆ ದೊರಕಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಸಚಿವರು, ಈ ಕುರಿತಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಫಲಿತಾಂಶವನ್ನು 24 ಗಂಟೆಯೊಳಗೆ ನೀಡುವಂತೆ ಸೂಚಿಸಿದ ಅವರು, ಇದರಿಂದಾಗಿ ಕೋವಿಡ್ ಇತರರಿಗೆ ಹರಡುವುದನ್ನು ತಪ್ಪಿಸಲು ಹಾಗೂ ರೋಗವನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ, ಸೋಂಕಿತರನ್ನು ಅಗತ್ಯ ಚಿಕಿತ್ಸೆಗೆ ಒಳಪಡಿಸುವುದರಿಂದ ಸಾವುಗಳು ಸಂಭವಿಸುವುದನ್ನು ತಡೆಯಲು ಸಾಧ್ಯವಾಗಲಿದೆ. ಸೋಂಕಿತರ ದ್ವಿತೀಯ ಸಂಪರ್ಕಿತರನ್ನು ಪರೀಕ್ಷಿಸುವಂತೆ ಸೂಚನೆ ನೀಡಿದ ಅವರು, ಇದರಿಂದಾಗಿ ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗಲಿದೆ ಎಂದರು.

ಕೋವಿಡ್ ನಿರ್ವಹಣೆ ಕುರಿತಂತೆ ರಚಿಸಲಾಗಿರುವ ಗ್ರಾಮೀಣ ಕಾರ್ಯಪಡೆಗಳು ಇನ್ನೂ ಹೆಚ್ಚು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ಸೋಂಕಿತರ ಮನೆ ಭೇಟಿಯ ಸಮಯದಲ್ಲಿ ಕಡ್ಡಾಯವಾಗಿ ಪಲ್ಸ್ ಆಕ್ಸಿಮೀಟರ್ ಮೂಲಕ ಪರಿಶೀಲಿಸಬೇಕು. 93% ಕಡಿಮೆ ಇದ್ದವರನ್ನು ಕೂಡಲೇ ಆಸ್ಪತ್ರೆಗಳಿಗೆ ಹಾ
ಗೂ 93 ರಿಂದ 95% ಒಳಗೆ ಇರುವವನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲು ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕೋವಿಡ್ ಕೇರ್ ಸೆಂಟರ್ಗಳಲ್ಲಿ 2 ಪಾಳಿಯಲ್ಲಿ ಕಾರ್ಯನಿರ್ವಹಿಸಲು ವೈದ್ಯರು, ಶುಶ್ರೂಷಕರು ಮತ್ತು ಸಹಾಯಕ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸೂಚಿಸಿದ ಸಚಿವರು, 2 ಪಾಳಿಯಲ್ಲಿ ರೋಗಿಗಳ ಆರೋಗ್ಯ ವಿಚಾರಿಸಿ, ಅಗತ್ಯ ಔಷಧಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಕೋವಿಡ್ ಕೇರ್
ಸೆಂಟರ್ನಲ್ಲಿ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲು ಆಂಬುಲೆನ್ಸ್ ಸಿದ್ಧವಾಗಿಟ್ಟುಕೊಳ್ಳಬೇಕು. ಆಕ್ಸಿಜನ್ ಕಾನ್ಸ್ನ್ಟ್ರೇಟರ್ಗಳನ್ನು ಅಳವಡಿಸಿ ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರು, ಗ್ರಾಮೀಣ ಪ್ರದೇಶದಲ್ಲಿ ಸೊಂಕಿತ ಗ್ರಾಮಗಳ ಭೇಟಿ ಮಾಡಿ ಪರಿಶೀಲನೆ ನಡೆಸುವುದರ ಜೊತೆಗೆ ಪ್ರತೀದಿನ 5 ಗ್ರಾಮಗಳ ಪಿಡಿಓ ಗಳು ಮತ್ತು ಸಂಬಂಧಪಟ್ಟ ತಹಸೀಲ್ದಾರ್ ಜೊತೆ ವಿಡಿಯೋ ಕಾನ್ಫರೆನ್ ಮೂಲಕ ಅಲ್ಲಿನ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ, ಅಗತ್ಯವಿರುವ ಸೂಚನೆಗಳನ್ನು ನೀಡಬೇಕು ಎಂದು ಬೊಮ್ಮಾಯಿ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಗ್ರಾಮ ಪಂಚಾಯತ್ಗಳಿಗೆ 50,000 ರೂ ಗಳ ಕೋವಿಡ್ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕು. ಗ್ರಾಮೀಣ ಕೋವಿಡ್ ಕಾರ್ಯಪಡೆಗಳಲ್ಲಿ ಮಾಜಿ ಜನಪ್ರತಿನಿಧಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಗ್ರಾಮಾಂತರ ಪ್ರದೇಶದಲ್ಲಿ ಲಸಿಕೆ ವಿತರಣೆಯನ್ನು ನಿಖರ ದಿನಾಂಕದAದು ಕ್ರಮಬದ್ಧವಾಗಿ ಆಯೋಜಿಸಬೇಕು. ಎಲ್ಲಾ ಕೋವಿಡ್ ರೋಗಿಗಳಿಗೆ ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಬೆಂಗಳೂರಿನ ವಿಕಾಸಸೌಧದಿಂದ ಶಾಸಕ ರಘುಪತಿ ಭಟ್ ಭಾಗವಹಿಸಿದ್ದರು. ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಡಿಹೆಚ್ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version