Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ದೋಣಿ ಮತ್ತು ಮೀನುಗಾರಿಕಾ ಸಲಕರಣೆ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 7 ಮಂದಿ ಅರ್ಹ ಫಲಾನುಭವಿಗಳಿಗೆ ತಲಾ 3.90ಲಕ್ಷ ರೂ. ಮೌಲ್ಯದ ದೋಣಿ ಮತ್ತಿತರ ಮೀನುಗಾರಿಕಾ ಸಲಕರಣೆಗಳನ್ನು ಮಂಗಳವಾರ ವಿತರಿಸಲಾಯಿತು.

ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್ ಬಳಿ ಫಲಾನುಭವಿಗಳಿಗೆ ದೋಣಿ ಮತ್ತಿತರ ಮೀನುಗಾರಿಕಾ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಸರಕಾರ ಮೀನುಗಾರರಿಗೆ ನೀಡಿದ ಯೋಜನೆಯ ಸದುಪಯೋಗ ಪಡೆದುಕೊಂಡು ಉತ್ತಮ ಮೀನುಗಾರಿಕೆ ನಡೆಸಬೇಕು. ಮೀನುಗಾರರು ನೆಮ್ಮದಿಯ ಜೀವನ ನಡೆಸುವಂತಾಗಬೇಕು. ಸರಕಾರದಿಂದ ಸಾಧ್ಯವಾದಷ್ಟು ಸಹಾಯವನ್ನು ಮೀನುಗಾರರಿಗೆ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.

ಸುಮಾರು 3.90ಲಕ್ಷ ರೂ. ಮೌಲ್ಯದ ಮೀನುಗಾರಿಕಾ ದೋಣಿ, ಇಂಜಿನ್, ಬಲೆ, ಲೈಫ್ ಜಾಕೆಟ್, ಶಾಖ ನಿರೋಧಕ ಪೆಟ್ಟಿಗೆಯನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಉಡುಪಿ ಮೀನುಗಾರಿಕೆ ಇಲಾಖೆ ಹಿರಿಯ ಉಪನಿರ್ದೇಶಕ ಗಣೇಶ ಕೆ., ಕುಂದಾಪುರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಗ್ರಾಪಂ. ಸದಸ್ಯ ಬಿ.ರಾಘವೇಂದ್ರ ಪೈ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಶೋಕ ಎನ್.ಡಿ., ಬಿಜೆಪಿ ಗುಜ್ಜಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮನಾಥ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.

Exit mobile version