Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾರ್ಥಿವೇತನದ ಸದುಪಯೋಗ ಪಡಿಸಿಕೊಳ್ಳಬೇಕು : ಶ್ರೀಕಾಂತ ಪೈ

ಗಂಗೊಳ್ಳಿ: ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು, ಉತ್ತಮ ಶಿಕ್ಷಣ ಪಡೆದುಕೊಳ್ಳುವಂತಾಗಬೇಕು. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ವಿದ್ಯಾಭ್ಯಾಸಕ್ಕೆ ಬೇಕಾಗುವ ಆರ್ಥಿಕ ಸಹಾಯವನ್ನು ಇಂತಹ ವಿದ್ಯಾರ್ಥಿವೇತನದ ಮೂಲಕ ಪಡೆದುಕೊಂಡು ಶಿಕ್ಷಣವನ್ನು ಮುಂದುವರಿಸಿಕೊಂಡು ವಿದ್ಯಾವಂತರಾಗಿ ಸಮಾಜದ ಆಸ್ತಿಯಾಗಬೇಕು ಎಂದು ಮುಂಬೈನ ದಾನಿ ಬಾಂಡ್ಯ ಶ್ರೀಕಾಂತ ಪೈ ಗಂಗೊಳ್ಳಿ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಸಭಾಂಗಣದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಸ್ಕೂಲ್ ಅಸೋಸಿಯೇಶನ್ ಪ್ರಾಯೋಜಿತ ಸರಸ್ವತಿ ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಸ್ಕೂಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಕಾಶೀನಾಥ ಪೈ ಮಾತನಾಡಿ, ಜಿಎಸ್‌ಬಿ ಸಮಾಜದ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ವಿದ್ಯಾನಿಧಿ ಯೋಜನೆ ಆರಂಭಿಸಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಅನಿವಾರ್ಯ ಕಾರಣಗಳಿಂದ ವಿದ್ಯಾರ್ಥಿವೇತನ ನೀಡುವಲ್ಲಿ ಸಾಧ್ಯವಾಗಿಲ್ಲ. ಇದೀಗ ಪುನ: ಅರ್ಹ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದ್ಯಾರ್ಥಿವೇತನ ವಿತರಿಸುವ ಗುರಿ ಹೊಂದಲಾಗಿದೆ ಎಂದರು.

ಸರಸ್ವತಿ ವಿದ್ಯಾಲಯ ಶಾಲೆಗಳ ಸಂಚಾಲಕ ಎನ್.ಸದಾಶಿವ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯು.ನಾರಾಯಣ ಪೈ ಕಾರ್ಯಕ್ರಮ ಉದ್ಘಾಟಿಸಿದರು. ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ ಶುಭಾಶಂಸನೆಗೈದರು. ಜಿಎಸ್‌ಬಿ ಸಮಾಜದ ಒಟ್ಟು 20 ವಿದ್ಯಾರ್ಥಿಗಳಿಗೆ ಸುಮಾರು 43 ಸಾವಿರ ರೂ.ಗಳ ವಿದ್ಯಾರ್ಥಿವೇತನ ವಿತರಿಸಲಾಯಿತು.

ಎಂ.ಜಿ. ರಾಘವೇಂದ್ರ ಭಂಡಾರ್‌ಕಾರ್ ಸ್ವಾಗತಿಸಿದರು. ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Exit mobile version