ಗಂಗೊಳ್ಳಿ: ಕಳೆದ ಕೆಲವು ದಿನಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯತ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ಅನಧಿಕೃತ ಲೋಡ್‌ಶೆಡ್ಡಿಂಗ್ ಮತ್ತು ವಿದ್ಯುತ್ ಕಡಿತಗೊಳಿಸುತ್ತಿರುವುದನ್ನು ವಿರೋಧಿಸಿ ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಸ್ಥಳೀಯ ಮೆಸ್ಕಾಂ ಶಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಇತ್ತೀಚಿಗೆ ನಿರಂತರವಾಗಿ ಎರಡು ದಿನಗಳ ಕಾಲ ವಿದ್ಯುತ್ ಸಂಪೂರ್ಣ ಕಡಿತಗೊಂಡಿರುವುದಲ್ಲದೆ, ರಾತ್ರಿ ವೇಳೆಯಲ್ಲಿ ನಿರಂತರವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ರಾತ್ರಿ ಸಮಯದಲ್ಲಿ ವಿದ್ಯುತ್ ಕಡಿತಗೊಂಡರೆ ಅದನ್ನು ಸರಿಪಡಿಸಲು ಯಾವುದೇ ಸಿಬ್ಬಂದಿಗಳಿಲ್ಲ. ಹೀಗಾಗಿ ಜನರು ರಾತ್ರಿ ವೇಳೆಯಲ್ಲಿ ವಿದ್ಯುತ್ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಕಳೆದ ಕೆಲವು ದಿನಗಳಿಂದ ಹಗಲು ರಾತ್ರಿಯೆನ್ನದೆ ನಿರಂತರವಾಗಿ ಲೋಡ್‌ಶೆಡ್ಡಿಂಗ್ ಮಾಡುತ್ತಿರುವ ಮೆಸ್ಕಾಂ ಕ್ರಮ ಖಂಡನೀಯವಾದುದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮಳೆಗಾಲದಲ್ಲಿ ಈ ಪರಿಸ್ಥಿತಿ ನಿರ್ಮಾಣಗೊಂಡರೆ ಬೇಸಿಗೆಯಲ್ಲಿ ಯಾವ ಪರಿಸ್ಥಿತಿ ಇರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಮಳೆಗಾಲದ ಈ ಸಮಯದಲ್ಲಿ ವಿದ್ಯುತ್ ಕೊರತೆ ನೆಪವೊಡ್ಡಿ ಅನಧಿಕೃತ ಲೋಡ್‌ಶೆಡ್ಡಿಂಗ್ ಮಾಡುವುದನ್ನು ನಿಲ್ಲಿಸಿ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ರಾತ್ರಿ ಸಮಯದಲ್ಲಿ ಸಿಬ್ಬಂದಿಗಳ ನೇಮಕ ಮಾಡಬೇಕು. ರಾತ್ರಿ ವೇಳೆ ನಿರಂತರವಾಗಿ ಒಂದೇ ಸಮಯದಲ್ಲಿ ವಿದ್ಯುತ್ ಕಡಿತಗೊಳ್ಳುತ್ತಿರುವುದನ್ನು ಪರಿಶೀಲಿಸಿ ಸೂಕ್ತ ಕ್ರಮಗೊಳ್ಳಬೇಕು ಎಂದು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರವೀಂದ್ರ ಪಟೇಲ್ ಮನವಿ ಮಾಡಿದ್ದಾರೆ.
ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷ ಮಹೇಶರಾಜ್ ಪೂಜಾರಿ, ಗ್ರಾಪಂ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ಚೆಂದು, ಗಂಗೊಳ್ಳಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿಲೀಪ್ ಖಾರ್ವಿ, ಮಹೇಶ ಪೂಜಾರಿ, ರಾಮನಾಥ ಚಿತ್ತಾಲ್ ಮೊದಲಾದವರು ಉಪಸ್ಥಿತರಿದ್ದರು.