Kundapra.com ಕುಂದಾಪ್ರ ಡಾಟ್ ಕಾಂ

ವಾಹನ ಸಂಚಾರಕ್ಕೆ ಮುಕ್ತವಾದ ಮರವಂತೆ ಕರಾವಳಿ ಮಾರ್ಗ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಡಲ್ಕೊರೆತ ಮತ್ತು ಚಂಡಮಾರುತದ ಹೊಡೆತದಿಂದ ಕಡಿದು ಹೋಗಿದ್ದ ಮರವಂತೆ ಕರಾವಳಿ ಮಾರ್ಗವನ್ನು ಮರುಜೋಡಿಸುವ ಕೆಲಸ ಪೂರ್ಣಗೊಂಡಿದ್ದು, ಅದೀಗ ಜನ ಮತ್ತು ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಮರವಂತೆ ಮೀನುಗಾರಿಕಾ ಹೊರಬಂದರಿನ ಉತ್ತರ ತಡೆಗೋಡೆಯ ಉತ್ತರದ ತೀರ ಪ್ರದೇಶ ನಿರಂತರ ಕಡಲ್ಕೊರೆತದಿಂದ ನಶಿಸುತ್ತಿತ್ತು. ಈಚಿನ ಚಂಡಮಾರುತದ ವೇಳೆ ಸಮುದ್ರದ ಮಟ್ಟ ಹೆಚ್ಚಿ, ಅಲೆಗಳ ಅಬ್ಬರ ತೀವ್ರಗೊಂಡ ಕಾರಣ ೩೫೦ ಮೀಟರು ಉದ್ದದ ರಸ್ತೆ ತುಂಡಾಗಿ ಸಂಪರ್ಕ ಕಡಿತಗೊಂಡಿತ್ತು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಹಿಂದಿನ ವಾರ ಭೇಟಿನೀಡಿ ತಾತ್ಕಾಲಿಕವಾಗಿ ಸಂಪರ್ಕ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಮರುದಿನದಿಂದಲೇ ಇಲ್ಲಿ ಸಮುದ್ರ ತೀರದುದ್ದಕ್ಕೆ ಕಲ್ಲಿನ ತಡೆ ನಿರ್ಮಿಸಿ, ಕುಸಿದ ರಸ್ತೆಯ ಭಾಗವನ್ನು ಎತ್ತರಿಸುವ ಕಾಮಗಾರಿ ಆರಂಭವಾಯಿತು. ಈಗ ಅದರ ಮೇಲೆ ಕಚ್ಚಾ ರಸ್ತೆ ನಿರ್ಮಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ನೀಡಿದ ಭರವಸೆಯಂತೆ ರಸ್ತೆ ಸಂಪರ್ಕ ಮರುಸ್ಥಾಪಿಸಲು ಕಾರಣರಾದ ಶಾಸಕರು ಮತ್ತು ಸಚಿವರಿಗೆ, ಕ್ಷಿಪ್ರ ಕಾಮಗಾರಿ ನಡೆಸಿದ ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಮರವಂತೆ ಮೀನುಗಾರರ ಪರವಾಗಿ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ ಖಾರ್ವಿ ಕೃತಜ್ಞತೆ ಸಲ್ಲಿಸಿದ್ದಾರೆ. ಆದಷ್ಟು ಶೀಘ್ರ ಈ ಭಾಗದಲ್ಲಿ ಮೊದಲಿದ್ದಂತೆ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು ಎಂದು ಅವರನ್ನು ವಿನಂತಿಸಿದ್ದಾರೆ.

Exit mobile version