Kundapra.com ಕುಂದಾಪ್ರ ಡಾಟ್ ಕಾಂ

ಕೋವಿಡ್ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಔಷಧಿ ವಿತರಣೆ

ಕುಂದಾಪ್ರ ಡಾಟ್ ಕಾಂ‌ ಸುದ್ದಿ.
ಬೈಂದೂರು: ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಹೋಮ್ ಐಸೋಲೇಶನ್ ಕೋವಿಡ್ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಔಷಧಿಗಳನ್ನು ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ವಿತರಿಸಲಾಯಿತು.

ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಪ್ಪಾಡಿ-ಗುಡಿಕೇರಿ, ಕಂಪ, ಮಣ್ಮನೆ, ಮಧುಕೋಡ್ಲು, ಮೈನಮಕ್ಕಿ ಮೊದಲಾದ ಪ್ರದೇಶಗಳಲ್ಲಿ ಸೋಂಕಿತರ ಮನೆಗೆ ತೆರಳಿ ಆಯುಷ್ ಔಷಧಿಗಳಾದ ಸಂಶಮನ ವಟಿ, ಆರ್ಕ್-ಇ-ಅಜೀಬ್, ಚ್ಯವನ ಪ್ರಾಶ, ಶರಬತ್-ಉ-ಉನಾಬ್, ಅಶ್ವಗಂಧ ಚೂರ್ಣ, ಆಯುಷ್-೬೪ ಮಾತ್ರೆಗಳನ್ನೊಳಗೊಂಡ ಕಿಟ್‌ಗಳನ್ನು ವಿತರಿಸಲಾಯಿತು. ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ ಅವರು ಔಷಧ ಸೇವನೆ ರೀತಿ, ಹೋಮ್ ಐಸೋಲೇಶನ್‌ನಲ್ಲಿರುವವರಿಗೆ ಆಹಾರ-ವಿಹಾರದ ಬಗ್ಗೆ ಮಾಹಿತಿ ನೀಡಿದರು.

ಆಯುಷ್ ಇಲಾಖೆ, ರಾಷ್ಟ್ರೀಯ ಆಯುಷ್ ಅಭಿಯಾನದಡಿಯಲ್ಲಿ ಹೋಮ್ ಐಸೋಲೇಶನ್ ಕೋವಿಡ್ ಸೋಂಕಿತರಿಗೆ ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಉಡುಪಿ ಮುಖಾಂತರ ಜಿಲ್ಲೆಯ ಎಲ್ಲಾ ತಾಲೂಕಿನ ಕಾರ್ಯನಿರ್ವಹಣಾಧಿಕಾರಿಯವರಿಗೆ ವಿತರಿಸಲಾಗಿದ್ದು, ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಮೂಲಕ ಹೋಮ್ ಐಸೋಲೇಶನ್ ಸೋಂಕಿತರಿಗೆ ಆಯುಷ್ ಔಷಧಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ.

ಕಾಲ್ತೋಡು ಗ್ರಾಪಂ ಪಿಡಿಒ ಸತೀಶ ತೋಳಾರ್, ಗ್ರಾಪಂ ಸದಸ್ಯ ರತೀಶ್ ಪೂಜಾರಿ, ಗ್ರಾಪಂ ಸಿಬ್ಬಂದಿ ಮಣಿಕಂಠ, ಆಶಾ ಕಾರ್ಯಕರ್ತೆ ಸುಮಿತ್ರ ಹಾಗೂ ಗ್ರಾಮ ಮಟ್ಟದ ಟಾಸ್ಕ್‌ಪೋರ್ಸ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Exit mobile version