Kundapra.com ಕುಂದಾಪ್ರ ಡಾಟ್ ಕಾಂ

ಶರಾವತಿ ಹಿನ್ನೀರಿನಲ್ಲಿ ಮುಳುಗಿದ ಕರೂರು ಸೀಮೆಯ ಕತ್ತಲು ಕತೆ..!

ಕುಂದಾಪ್ರ ಡಾಟ್ ಕಾಂ ವರದಿ.
ರಾಜ್ಯಕ್ಕೆ ಬೆಳಕು ನೀಡುವುದಕ್ಕಾಗಿ ತ್ಯಾಗ ಮಾಡಿದ ಕರೂರು ಸೀಮೆ ಜನರಿಗೆ ಶರಾವತಿ ಹಿನ್ನೀರು ಕರಿನೀರಿನ ಶಿಕ್ಷೆ ಬರೆ! ಪೇಟೆ ಪಟ್ಟಣ ಬೇರೆ ಕಡೆಯ ಮನೆಯಲ್ಲಿ ವಿದ್ಯುತ್ ದೀಪ ಬೆಳಗಿದರೆ ಕರೂರು ಸೀಮೆಯಲ್ಲಿ ಇಂದಿಗೂ ಬುಡ್ಡಿದೀಪ! ಈ ಮುಳುಗಡೆ ಸೀಮೆಯಲ್ಲಿ ಕತ್ತಲು ಕಳೆದು ಬೆಳಕು ಮೂಡಿಲ್ಲ! ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು, ಕರೂರು ಸೀಮೆ ನಾಲ್ಕು ಗ್ರಾಮ ಸಾವಿರ ಮನೆ, 8 ಸಾವಿರ ನಿವಾಸಿಗಳ ಬದುಕು ಕತ್ತಲಲ್ಲೇ ಕಳೆದು ಹೋಗುತ್ತದೆ. ಕರೂರು ಸೀಮೆ ಉಸಿರಿರೋದು ಸಾಗರದಲ್ಲಿ. ಸಾಗರ ಸಂಪರ್ಕಿಸುವ ಎರಡು ರಸ್ತೆಯಲ್ಲಿ ಒಂದು ರಸ್ತೆಗೆ ಹೊಳೆ ಅಡ್ಡ ಬಂದರೆ, ಮತ್ತೊಂದು ರಸ್ತೆ ಕೊಂಕಣ ಸುತ್ತಿ ಮೈಲಾರ ಸೇರಿದಂತೆ!

ಕರೂರು ಸೀಮೆಯಲ್ಲಿ ಹವ್ಯಕ, ಜೈನ, ದೀವರು, ಹಸಲ ಜನಾಂಗದ ಜೊತೆ ಇನ್ನಿತರ ಪಂಗಡದವರಿದ್ದಾರೆ. ತುಂಬ್ರಿಯಲ್ಲಿ ಪಿಯುಸಿ ತನಕ ವಿದ್ಯಾಭ್ಯಾಸ. ತಾಕಿತ್ತಿದ್ದವರು ಪೇಟೆಯಿಂದ ಕಾಲೇಜು ಸೇರಿದರೆ, ಓದುವ ಆಸೆಯಿದ್ದು ಆಗದೆ ಮನೆಯಲ್ಲಿ ಕೂತ ಯುವಕರೆಷ್ಟೋ. ಈ ಗ್ರಾಮದಲ್ಲಿ ಅಧಿಕ ಅಡಕೆ ಕೃಷಿಕರಿದ್ದು, ಅವರಿಗೆ ಮಾರುಕಟ್ಟೆ ಸಾಗರ. ತಾವು ಬೆಳೆದಿದ್ದ ಮಾರೋದಕ್ಕೂ, ಮನೆ ಪಡಿತರ ತರೋದಕ್ಕೂ ಸಾಗರವೇ ವಾಣಿಜ್ಯ ನಗರಿ. ಕಳಸೊಳ್ಳಿ ಹೊಳೆಬಾಗಿಲು ಲಾಂಚ್ ದಾಟಿ ಸಾಗರಕ್ಕೆ ಹೋಗಿಬರೋದ್ರಲ್ಲೇ ಕರೂರು ಸೀಮೆ ವಾಸಿಗಳ ಆಯುಷ್ಯ ಸವೆಯುತ್ತಿದೆ. ಮಾಹಿತಿ ತಂತ್ರಜ್ಞಾನ ವಿಶ್ವವೇ ಅಂಗೈಗೆ ತಂದರೆ, ಕರೂರು ಸೀಮೆ ಗುಮಗೋಡು, ಚುಟ್ಟಿಕೆರೆ, ತೊರೆಮನೆ, ಹುಣ್ಸೆಕೆರೆ, ಚೀಗೋಡು, ಅರಬೈಲು, ಹುಣ್ಸೆಮನೆ ನಾಗರಿಕ ಸಂಪರ್ಕದಿಂದ ದೂರ. ಕರೂರು ಸೀಮೆ ಹೃದಯದಂತಿರುವ ತುಂಬ್ರಿಯೇ ಸೂರ ಸಂಪರ್ಕ ವಂಚಿತ. ಸಿಗಂದೂರು ದೇವಸ್ಥಾನ ಬಳಿ ಮೊಬೈಲ್ ಟವರ್ ಬಿಟ್ಟರೆ ಮತ್ತೆಲ್ಲೂ ಪೋನ್ ತಣ್ಣಗೆ ಮಲಗಿದರೆ ಗುಮಗೋಡಲ್ಲಿ ಪೋನ್ ಗುನಗೋದಲ್ಲ. ಒಟ್ಟಾರೆ ಇಲ್ಲಿ ಹೋರಾಟವೇ ಬದುಕಾಗಿದೆ.

 

ಲಿಂಗನಮಕ್ಕಿ ಆಣೆಕಟ್ಟು ಹಿನ್ನೀರು ಕರೂರು ಸೀಮೆಗೆ ಕರಿನೀರಿನ ಶಿಕ್ಷೆ ಆಗುತ್ತದೆ ಎಂದು ಭಾವಿಸಿರಲಿಲ್ಲ. ಹಿನ್ನೀರು ಒಂದೇಒಂದೇ ಮನೆ, ಊರು, ಮುಳುಗಿಸುತ್ತಾ ಬಂದಂತೆಲ್ಲಾ ಕಷ್ಟದ ಅನಾವರಣ ಮಾಡಿಸಿತು. ಕಳಸೊಳ್ಳಿ ಗ್ರಾಮ ಹೊಳೆಬಾಗಿಲು ಬಳಿ ಲಾಂಚ್ ಬರುವ ತನಕ ಕರೂರು ಸೀಮೆ ಜನ ಕೋಗಾರು ಜೋಗದ ಮೂಲಕ ಸುತ್ತಿಬಳಸಿ ಸಾಗರ ಸೇರಿ, ಮನೆಗೆ ಬೇಕಾದ ಸಾಮಾನು, ಅಡಕೆ ವಹಿವಾಟು ಮಾಡಬೇಕಿತ್ತು. ಶರಾವತಿ ಹಿನ್ನೀರು ಆವರಿಸಿದ ಹೊಳೆಬಾಗಿಲಲ್ಲ ಲಾಂಚ್ ಮಂಜೂರು ಮಾಡಿಸಿಕೊಳ್ಳಲು ಕರೂರು ಸೀಮೆ ಜನ ಬೆವರು ಸುರಿಸಿದರು. ಹೊಳೆಬಾಗಿಲು ಅಂಬ್ರಗೋಡ್ಲು, ಗೆಣಸಿಕುಣಿ ಮೂಲಕ ಸಾಗರಕ್ಕೆ 35 ಕೀಮೀ ಆದರೆ ಕೋಗಾರ್, ಜೋಗ ಮೂಲಕ ಸಾಗರಕ್ಕೆ ೮೦ ಕೀಮೀ ಕರೂರು ಸೀಮೆ ಜನ ತಮ್ಮ ದೈನಿಂದನ ಕೆಲಸಕ್ಕಾಗಿ ಬಸ್ಸಿನಲ್ಲಿ ಆಯಸ್ಸು ಸವೆಸಬೇಕಿತ್ತು. ಹೊಳೆಬಾಗಿಲಲ್ಲಿ ಬಳಿ ಸೇತುವೆ ಮಾಡಿಕೊಡಿ ಎಂದು ಜನ ಮತ್ತೆ ಹೋರಾಟ ಆರಂಭಿಸಿದರೂ ಆಡಳಿತದಲ್ಲಿದ್ದ ಸರ್ಕಾರ ಗಮನ ಕೊಡಲಿಲ್ಲ.

ಸಾಕಾರಗೊಳ್ಳುತ್ತಿದೆ ಸೇತುವೆ ಕನಸು:
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಸೇತುವೆ ಹೋರಾಟಕ್ಕೆ ಮತ್ತೆ ಜೀವಬಂತು. ಸತತ ವರದಿ ಹಾಗೂ ಜನರ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇತುವೆಗೆ ಹಸಿರು ನಿಶಾನೆ ನೀಡಿದ್ದರು. ರಾಜ್ಯದ ಅತೀ ಉದ್ದದ ೨ನೇ ಸೇತುವೆ ಕೇಂದ್ರ ಸರಕಾರ ಸಹಯೋಗದೊಂದಿಗೆ ಸಂಸದ ಬಿ. ವೈ, ರಾಘವೇಂದ್ರ ಅವರ ಮುತುವರ್ಜಿಯಲ್ಲಿ ನಿರ್ಮಾಣವಾಗುತ್ತಿದೆ. ಕಾಮಗಾರಿ ಶೇ.೪೦ರಷ್ಟು ಆಗಿದ್ದು ಎನ್ನೊಂದು ವರ್ಷದಲ್ಲಿ ಸೇತುವೆ ಸಂಚಾರ ಮುಕ್ತವಾಗಲಿದೆ. ಲಾಂಚ್ ಮೂಲಕ ಹೊಳೆ ದಡ ಸೇರುವಷ್ಟರಲ್ಲಿ ಸೇತುವೆ ಮೂಲಕ ಸಾಗರ ಮುಟ್ಟಬಹುದು..! ಸೇತುವೆ ಮಂಜೂರು ಮಾಡಿದ ಬಿ.ಎಸ್.ಯಡಿಯೂರಪ್ಪ ಮೇಲೆ ಕರೂರು ಜನರ ನಿರೀಕ್ಷೆ ಬೆಟ್ಟದಷ್ಟಿದ್ದು, ದೂರವಾಣಿ ಸಮಸ್ಯೆಗೆ ಪರಿಹಾರ ಕೊಡುತ್ತಾರೆ ಎನ್ನುವ ಭರವಸೆ ಇಟ್ಟುಕೊಂಡಿದ್ದಾರೆ. ಜನರ ನಂಬಿಕೆಗೆ ಪೂರಕವಾಗಿ ಸಂಸದ ಬಿ.ವೈ.ರಾಘವೇಂದ್ರ ಮೊಬೈಲ್ ಟವರ್ ನಿರ್ಮಾಣದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ಕರೆಯುವ ಸಿದ್ದತೆ ಮಾಡಿಕೊಂಡಿದ್ದಾರೆ.

ಕರೂರು ಸೀಮೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಬಿಎಸ್‌ಎನ್‌ಎಲ್, ಖಾಸಗಿ ಮೊಬೈಲ್ ನೆಟ್‌ವರ್ಕ್ ಕಂಪನಿ ಅಧಿಕಾರಿಗಳ ಜೊತೆ ತಕ್ಷಣ ಸಭೆ ನಡೆಸಿ, ಟವರ್ ನಿರ್ಮಾಣದ ಮಾಡುವ ಗಟ್ಟಿಯಾದ ಹೆಜ್ಜೆ ಇಡಲಾಗುತ್ತದೆ. ಹೊಳೆಬಾಗಿಲಲ್ಲಿ ಸೇತುವೆ ನಂತರ ಕರಾವಳಿ ಮತ್ತು ಮಲೆನಾಡು ಇನ್ನಷ್ಟು ಹತ್ತರವಾಗಲಿದ್ದು, ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಈ ಎಲ್ಲಾ ದೃಷ್ಟಿಯಲ್ಲಿ ದೂರವಾಣಿ ಸಂಪರ್ಕ ತುರ್ತು ಅವಶ್ಯವಿರುವುದರಿಂದ ಮೊಬೈಲ್ ಸಂಪರ್ಕಕ್ಕೆ ಎಲ್ಲಾ ಪ್ರಯತ್ನ ಮಾಡಲಾಗುತ್ತದೆ.– ಬಿ. ವೈ. ರಾಘವೇಂದ್ರ, ಸಂಸದರು

 

ಲಿಂಗನಮಕ್ಕಿ ಹಿನ್ನೀರು ನಮ್ಮ ಊರಿಗೆ ಕರಿನೀರಿನ ಶಿಕ್ಷೆ. ಗುಮಗೋಡು, ಕರೂರು ಸೀಮೆ ಎಲ್ಲಾ ವ್ಯವಹಾರ ಸಾಗರದಲ್ಲಿದ್ದು, ಹೋಗಿಬರುವುದಕ್ಕೆ ಒಂದುದಿನ ಮೀಸಲು. ಅಡಕೆ, ಏಲಕ್ಕೆ, ಕಾಳುಮೆಣಸು ಬೆಳಗಳ ಬೆಲೆ ಮಾಹಿತಿ ಪಡೆಯಲು ಪೇಟೆಗೆ ಹೋಗಿ ಬರುವ ಅನಿವಾರ್ಯತೆ ಇದೆ. ವಾಣಿಜ್ಯ ಕೃಷಿ ಅವಲಂಬಿತರೇ ಇಲ್ಲಿರುವುದರಿಂದ ದೂರವಾಣಿ ನಮಗೆ ಅತ್ಯಾವಶ್ಯಕ. ಇನ್ನು ತುರ್ತು ಪರೀಸ್ಥಿಯಲ್ಲಂತೂ ನಾವು ನೀರಿಂದ ತೆಗೆದ ಮೀನು. ನಾವು ರಾಜ್ಯದ ಬೆಳಕಿಗಾಗಿ ನಮ್ಮ ಮನೆ ಕತ್ತಲೆ ಮಾಡಿಕೊಂಡಿದ್ದೇವೆ. ಪೋನ್ ಸಂಪರ್ಕದ ಇಂದಿನ ಅನಿವಾರ್ಯತೆ ಆಗಿದ್ದು, ಸಂಪರ್ಕದ ಮೂಲಕ ನಮ್ಮನ್ನು ನಮ್ಮಷ್ಟಕ್ಕೆ ಬದುಕಲು ಬಿಡಬೇಕು. ಊರಲ್ಲಿ ಹುಷಾರು ತಪ್ಪಿದರೆ, ಬೇರೆ ಕಡೆ ಇರುವವರಿಗೆ ಏನಾದರೂ ಆದರೆ ಗೊತ್ತಾಗುವುದೇ ಇಲ್ಲ. – ಮಹಾಬಲಗಿರಿ, ಕೃಷಿಕ, ಗುಮಗೋಡು.

 

ಕರೋನಾ ಲಾಕ್ಡೌನ್ ನಂತರ ಕರೂರು ಸೀಮೆ ಯುವಕರು ವರ್ಕ್ ಫ್ರೆಂಮ್ ಹೋಮಾಗಿದ್ದು, ನೆಟ್‌ವರ್ಕ್ ಎಲ್ಲಿ ಸಿಗುತ್ತೆ ಅಂತ ಹುಡುಕಿ ಕೊನೆಗೂ ಸಿಗಂದೂರು ಬಳಿ ನೆಟ್‌ವರ್ಕ ಪತ್ತೆಮಾಡಿ ನೂರಕ್ಕೂ ಮಿಕ್ಕ ಯುವಕರು ಸಿಗಂದೂರು ಗುಡ್ಡವೇರಿ ಕೆಲಸ ಮಾಡುತ್ತಿದ್ದು, ಮಳೆ ಬಂದರೆ ಸಿಗಂದೂರು ದೇವಸ್ಥಾನ ಆಶ್ರಯಿಸುತ್ತಾರೆ. ಕರೂರು ಸೀಮೆಯಲ್ಲಿ ಪಿಯುಸಿ ತನಕ ವಿದ್ಯಾಭ್ಯಾಸವಿದ್ದು, ಉನ್ನತ ಶಿಕ್ಷಣಕ್ಕೆ ಸಾಗರ ಅಥವಾ ಶಿವಮೊಗೆಗೆ ಹೋಗಬೇಕು. ಕರೋನಾ ಹಿನ್ನೆಲೆಯಲ್ಲಿ ಆನ್‌ಲೈನ್ ಕ್ಲಾಸ್ ಮಿಸ್ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತದೆ. ಶರಾವತಿ ಹಿನ್ನೂರು ಕರೂರು ಸೀಮೆ ದ್ವೀಪ ಮಾಡಿದ್ದು, ಅತ್ಯಂತ ಕುಗ್ರಾಮಗಳಿದ್ದು, ಜ್ವರ ಜಾಪತ್ತು ಬಂದರೆ ಕಂಬಳಿ ಜೋಲಿಯೇ ಗತಿ. ಇಂತಾ ಊರಲ್ಲಿ ದೂರವಾಣಿ ಇದ್ದರೆ ಬದುಕಲು ಆಕ್ಸಿಜನ್ ಸಿಕ್ಕಂತೆ ಆಗುತ್ತದೆ. – ಅಶ್ವಿನಿ ಜಿ.ಎಸ್, ಗೃಹಿಣಿ, ಗುಮಗೋಡು

Exit mobile version