Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಕೋವಿಡ್ ಆಸ್ಪತ್ರೆ ಹಾಗೂ ಜಡ್ಕಲ್ ಗ್ರಾ.ಪಂಗೆ ಡಿಸಿ ಜಿ. ಜಗದೀಶ್ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರೋನಾ ಹೆಚ್ಚುತ್ತಿರುವ ಗ್ರಾಮಗಳು ಲಾಕ್ಡೌನ್ ಮಾಡಿಕೊಳ್ಳುತ್ತಿದ್ದು, ಹೊಸ ಪ್ರಕರಣ ಹಾಗೂ ಸೋಂಕು ಹೆಚ್ಚದಂತೆ ವೈದ್ಯರ ನಡಿಗೆ ಹಳ್ಳಿಯ ಕಡೆ ಮೂಲಕ ಹಳ್ಳಿಯಲ್ಲಿರುವ ಎಲ್ಲರ ಕರೋನಾ ಟೆಸ್ಟ್ ಮಾಡಬೇಕು ಎಂದು ತಿಳಿಸಲಾಗಿದೆ. ಇದರಿಂದ ಹಳ್ಳಿಗಳನ್ನು ಕರೋನಾ ಮುಷ್ಟಿಯಿಂದ ಬಿಡಿಸುವ ಪ್ರಯತ್ನ ನಡೆಯುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಕುಂದಾಪುರ ತಾಲೂಕು ಆಸ್ಪತ್ರೆ ಕೋವಿಡ್ ಸೆಂಟರ್ ಹಾಗೂ ಸ್ವಯಂಪ್ರೇರಿತ ಲಾಕ್ಡೌನ್ ಮಾಡಿಕೊಂಡ ಮಾಡಿಕೊಂಡು ಜಡ್ಕಲ್ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಕರೋನಾ ವಿಸ್ತರಣೆ ಚೈನ್ ತುಂಡರಿಸುವ ನಿಟ್ಟಿನಲ್ಲಿ ಲಾಕ್ಡೌನ್ ಮಾಡಲಾಗಿದ್ದು, ಜೂ.7ರ ಒಳಗೆ ಪಾಸಿಟಿವ್ ಪ್ರಮಾಣ 10ಕ್ಕಿಂತ ಕಡಿಮೆ ಬಾರದಿದ್ದರೆ ಲಾಕ್ಡೌನ್ ವಿಸ್ತರಣೆ ಅನಿವಾರ್ಯ. ಸಾರ್ವಜನಿಕರು ನಿಯಮ ಕಡ್ಡಾಯವಾಗಿ ಪಾಲಿಸುವ ಮೂಲಕ ಪಾಸಿಟಿವ್ ಪ್ರಮಾಣ ಇಳಿಸುವ ಜೊತೆ ಲಾಕ್ಡೌನ್ ಮುಕ್ತಿಗೆ ಸಹಕಾರ ನೀಡಬೇಕು ಎಂದರು.

ಉಡುಪಿ ಜಿಲ್ಲೆಯಲ್ಲಿ ಕರೋನಾ ಪಾಸಿಟಿವಿಟಿ ರೇಟ್ ಶೇ.16ಕ್ಕೆ ಇಳಿದರೂ ಇದು ಸಾಕಾಗೋದಿಲ್ಲ. ಪಾಸಿಟಿವ್ ದರ 10ಕ್ಕಿಂತ ಕಡಿಮೆಗೆ ಬರಬೇಕು ಎನ್ನೋದು ಗುರಿಯಾಗಿದೆ. ಪಾಸಿಟಿವಿಟಿ ರೇಟ್ ಕಡಿಮೆ ಮಾಡಲು ಜನರ ಸಹಕಾರ ಅತೀ ಅಗತ್ಯವಾಗಿದೆ. ಅನಾವಶ್ಯಕವಾಗಿ ಓಡಾಡಿದರೆ, ನಿಯಮ ಪಾಲಿಸದಿದ್ದರೆ ಪಾಸಿಟಿವಿಟಿ ರೇಟ್ ಕಡಿಮೆ ಆಗದು. ಸಾರ್ವಜನಿಕರು ಕೋವಿಡ್ ನಿಯಮ ಪಾಲಿಸಿ ಸಹಕರಿಸಿ ಎಂದು ಮನವಿ ಮಾಡಿದರು.

ಜಿಲ್ಲೆಯ ಪಾಸಿಟಿವ್ ಪ್ರಕರಣ ೫೦ಕ್ಕಿಂತ ಹೆಚ್ಚಿರುವ 35 ಗ್ರಾಮ ಪಂಚಾಯಿತಿಗಳನ್ನು ಉಸ್ತುವಾರಿ ಸಚಿವರು, ಶಾಸಕರ, ಸಂಸದರ ಜೊತೆ ಚರ್ಚಿಸಿ ಲಾಕ್ಡೌನ್ ಮಾಡಲಾಗಿದೆ. ಸೋಂಕು ಏರಿಕೆ ಹಂತದಲ್ಲಿರುವ ಕೆಲವೊಂದು ಪಂಚಾಯಿತಿ ಸ್ವಇಚ್ಛೆಯಿಂದ ನಿರ್ಬಂಧ ಹೇರಿಕೊಳ್ಳುತ್ತಿವೆ. ಪಾಸಿಟಿವ್ ಹೆಚ್ಚಿರುವ ಗ್ರಾಪಂಗಳಿಗೆ ಹೊಂದಿಕೊಂಡಿರುವ ಹಳ್ಳಿಗಳ ಸೀಲ್ ಡೌನ್ ಮಾಡುವ ಬಗ್ಗೆ ಸಿಇಓ, ಗ್ರಾಪಂ ಅಧ್ಯಕ್ಷ, ಸದಸ್ಯರ ಪಿಡಿಓ ಜೊತೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲು ಸಿಇಓಗೆ ಸೂಚಿಸಲಾಗಿದೆ ಎಂದರು.

ಕೋವಿಡ್ ಆಸ್ಪತ್ರೆಗೆ ಭೇಟಿ ನೀಡುವ ಮುನ್ನಾ ಅವರು ಕುಂದಾಪುರ ಶಾಸ್ತ್ರಿ ವೃತ್ತದಲ್ಲಿರುವ ಚೆಕ್ ಪೋಸ್ಟ್ ಬಳಿ ಭದ್ರತೆ ಪರಿಶೀಲಿಸಿ, ಅನಾವಶ್ಯಕವಾಗಿ ಸಂಚಾರ ಮಾಡುತ್ತಿದ್ದ ವಾಹನಗಳ ಸೀಜ್ ಮಾಡಿ ಕಾನೂನು ಕ್ರಮಕ್ಕೆ ಸೂಚಿಸಿದರು.

ಕುಂದಾಪುರ ಸಹಾಯಕ ಆಯುಕ್ತ ಕೆ.ರಾಜು, ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಬರ್ಡ್ ರೊಬೆಲ್ಲೊ, ಕೋವಿಡ್ ಸೆಂಟರ್ ನೋಡಲ್ ಅಧಿಕಾರಿ ಡಾ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.

ಜಡ್ಕಲ್ ಮೈಕ್ರೋ ಕಂಟೇನ್ಮಂಟ್ ಪ್ರದೇಶಕ್ಕೆ ಭೇಟಿ
ಜಿಲ್ಲೆಯಲ್ಲಿ ಮೊದಲು ಲಾಕ್ಡೌನ್ ಮಾಡಿಕೊಂಡ ಜಡ್ಕಲ್ ಗ್ರಾಮ ಮೈಕ್ರೋ ಕಂಟೇನ್ಮೆಂಟ್ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪಾಸಿಟಿವ್ ವ್ಯಕ್ತಿಗಳಿಗೆ ದೈರ್ಯ ಹೇಳಿದರು.

ಪ್ರತಿಯೊಂದು ಹೋಮ್ ಕ್ವಾರಂಟೈನ್ ಮನೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿ, ಹೋಮ್ ಕ್ವಾರಂಟೈನ್ ಆದವರಿಗೆ ಧೈರ್ಯ ಹೇಳಿದ್ದಲ್ಲದೆ ಔಷಧಿ ಪೂರೈಕೆ ಬಗ್ಗೆ ಮಾಹಿತಿ ಪಡೆದು ಸ್ವತಃ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ಮಾಡಿದ ಚೆಕ್ಪೋಸ್ಟ್ ವ್ಯವಸ್ಥೆ ಕೂಡಾ ಪರಿಶೀಲನೆ ಮಾಡಿದರು. ಪಾಸಿಟಿವ್ ಪ್ರಕರಣ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಜಡ್ಕಲ್ ಗ್ರಾಮ ಪಂಚಾಯಿತಿ ಮೊಟ್ಟಮೊದಲು ಲಾಕ್ಡೌನ್ ಮಾಡಿಕೊಳ್ಳುವ ಮೂಲಕ ಇತರೆ ಗ್ರಾಮಗಳಿಗೂ ಪ್ರೇರಣೆ ನೀಡಿದ್ದು, ಗ್ರಾಪಂ ನಡೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಡಿವೈಎಸ್ಪಿ ಶ್ರೀಕಾಂತ್, ಗ್ರಾಪಂ ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮಣ ಶೆಟ್ಟಿ, ವೈದ್ಯರು, ಆಶಾ ಕಾರ್ಯಕರ್ತರು, ಗ್ರಾಪಂ ಸದಸ್ಯರು, ಊರ ಪ್ರಮುಖರು ಇದ್ದರು.

Exit mobile version