Kundapra.com ಕುಂದಾಪ್ರ ಡಾಟ್ ಕಾಂ

ದುಬೈನ ಉದ್ಯಮಿ ಕೊಡಮಾಡಿದ ಆಕ್ಸಿಜನ್ ಕಾನ್ಸ್‌ಟ್ರೇಟರ್ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದುಬೈನ ಉದ್ಯಮಿಯೊಬ್ಬರು ಕೊಡಮಾಡಿದ ಸುಮಾರು 60 ಸಾವಿರ ರೂ. ವೆಚ್ಚದ ಆಕ್ಸಿಜನ್ ಕಾನ್ಸ್‌ಟ್ರೇಟರ್‌ನ್ನು ಗಂಗೊಳ್ಳಿ ತೌಹೀದ್ ಎಜ್ಯಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಅಖ್ತರ್ ಅಹಮ್ಮದ್ ಖಾನ್ ಅವರು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಮತ್ತು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗಭೂಷಣ ಉಡುಪ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಸಹಾಯಕ ಆಯುಕ್ತ ಕೆ. ರಾಜು, ಕೋವಿಡ್ ಎರಡನೇ ಅಲೆ ಎದುರಿಸಲು ಆಸ್ಪತ್ರೆಗೆ ಬೇಕಾದ ಕೆಲವೊಂದು ಮೂಲಭೂತ ಸೌಲಭ್ಯ ಹಾಗೂ ಇನ್ನಿತರ ಅಗತ್ಯತೆಗಳನ್ನು ದಾನಿಗಳು ಒದಗಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಯಾವುದೇ ತೊಂದರೆಯಾಗಿಲ್ಲ. ಕುಂದಾಪುರ ಮತ್ತು ಬೈಂದೂರು ತಾಲೂಕುಗಳಲ್ಲಿ ಸುಮಾರು ೩ ಸಾವಿರಕ್ಕೂ ಮಿಕ್ಕಿ ಸೋಂಕಿತರು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ. ಎನ್‌ಜಿಒಗಳು ಸರಕಾರ ಹಾಗೂ ಇಲಾಖೆಯೊಂದಿಗೆ ಸ್ಪಂದಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಡಾ.ನಾಗಭೂಷಣ ಉಡುಪ ಮಾತನಾಡಿ, ಕರೋನಾ ಮೂರನೇ ಎದುರಿಸಲು ಆರೋಗ್ಯ ಇಲಾಖೆ ಈಗಾಗಲೇ ಸಿದ್ಧತೆ ಆರಂಬಿಸಿದೆ. ಆಸ್ಪತ್ರೆಗಳಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ನಡೆಯುತ್ತಿದ್ದು, ಸಾಕಷ್ಟು ಸಿಬ್ಬಂದಿಗಳ ನಿಯೋಜನೆ ಕೂಡ ನಡೆಯುತ್ತಿದೆ. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತಿ ಶೀಘ್ರ ಖಾಯಂ ವೈದ್ಯಾಧಿಕಾರಿ ನೇಮಕ ಮಾಡಲಾಗುವುದು ಮತ್ತು ಸೂಕ್ತ ನಿವೇಶನ ದೊರೆತರೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ಡಾ.ನಾಗಭೂಷಣ ಉಡುಪ ಅವರನ್ನು ನಾಗರಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಂಜಿತ್, ಗ್ರಾಪಂ. ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಪಿಡಿಒ ಉಮಾಶಂಕರ, ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ವೆಂಕಟೇಶ ಗೊಲ್ಲ, ಗಂಗೊಳ್ಳಿ ಜಮಾತುಲ್ ಮುಸ್ಲಿಮಿನ್ ಅಧ್ಯಕ್ಷ ಪಿ.ಎಂ.ಹಸೈನಾರ್, ಕಾರ್ಯದರ್ಶಿ ರೆಹಾನ್, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಉಪಸ್ಥಿತರಿದ್ದರು.

ಪತ್ರಕರ್ತ ಬಿ.ರಾಘವೇಂದ್ರ ಪೈ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅಖ್ತರ್ ಅಹಮ್ಮದ್ ಖಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಶಾ ಕಾರ್ಯಕರ್ತೆ ಕಲ್ಪನಾ ಶೇರುಗಾರ್ ವಂದಿಸಿದರು.

Exit mobile version