Kundapra.com ಕುಂದಾಪ್ರ ಡಾಟ್ ಕಾಂ

ಸಮುದಾಯಕ್ಕೂ ಋಣ ತೀರಿಸುವ ಹೊಣೆಯಿದೆ

ಕುಂದಾಪುರ: ಸಮುದಾಯದ ನೆರವಿನಿಂದ ಉತ್ಕರ್ಷ ಸಾಧಿಸಿರುವುದಕ್ಕೆ ಪ್ರತಿಯಾಗಿ ಅದರ ಋಣ ಸಂದಾಯ ಮಾಡಬೇಕಾದುದು ವ್ಯಕ್ತಿಯ ಕರ್ತವ್ಯ. ಅದೇ ರೀತಿ ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಿದ ವ್ಯಕ್ತಿಯ ಋಣ ತೀರಿಸುವ ಹೊಣೆ ಸಮುದಾಯದ ಮೇಲಿದೆ. ಪ್ರಕಾಶ ರಾವ್ ಅವರಿಗೆ ಸಲ್ಲಿಸಿದ ಸನ್ಮಾನ ಅಂತಹ ಋಣ ಸಂದಾಯದ ಪ್ರತೀಕ ಎಂದು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.

 ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮಹಾ ಪ್ರಬಂಧಕ ಕೆ. ಎಸ್. ಪ್ರಕಾಶ ರಾವ್ ಅವರ ೭೫ನೆ ಜನ್ಮದಿನದ ಸಂದರ್ಭ ಶಾಲೆಯ ಶಿಕ್ಷಕ, ಸಿಬಂದಿ, ವಿದ್ಯಾರ್ಥಿ, ಪೋಷಕರ ವತಿಯಿಂದ ಶನಿವಾರ ಶಾಲೆಯಲ್ಲಿ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಾದ ಧರ್ಮಶ್ರೀ, ಮಲ್ಲಿಕಾ, ನೀರಜ್, ಅನುಷಾ ಪೈ, ಶಿಕ್ಷಕರಾದ ರಾಜೇಶ್, ಜ್ಯೋತಿ ಮಯ್ಯ, ಶ್ರೀನಿವಾಸ ಪ್ರಭು, ಪೋಷಕರ ಪ್ರತಿನಿಧಿ ಡಾ. ಜಿ. ಪ್ರಕಾಶ ಕೊಡಂಚ, ಬಿ. ಜಗನ್ನಾಥ ಶೆಟ್ಟಿ, ಸುಬ್ಬಣ್ಣ ಶೆಟ್ಟಿ ಪ್ರಕಾಶ ರಾವ್ ಅವರ ವ್ಯಕ್ತಿತ್ವ, ಸಾಧನೆ, ಕೊಡುಗೆಗಳ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮಾತನಾಡಿ ಪ್ರಕಾಶ ರಾವ್ ಅವರು ತಮ್ಮ ತಂದೆ, ಖಂಬದಕೋಣೆಯ ಪ್ರಗತಿಯ ರೂವಾರಿ ಆರ್. ಕೆ. ಸಂಜೀವ ರಾವ್ ಅವರ ಆದರ್ಶ, ಸೇವಾ ಪರಂಪರೆಯನ್ನು ಮುಂದಕ್ಕೊಯ್ಯುವ ಕೆಲಸ ನಡೆಸುತ್ತಿರುವುದಕ್ಕಾಗಿ ಅವರನ್ನು ಅಭಿನಂದಿಸಿದರು.

ಪ್ರಕಾಶ ರಾವ್ ಅವರಿಗೆ ಫಲಪುಷ್ಪ, ಸ್ಮರಣಿಕೆ, ಸಂಮಾನ ಪತ್ರ ನೀಡಿ ಗೌರವಿಸಲಾಯಿತು. ಅಭಿಮಾನಿಗಳು ಹಾರಾರ್ಪಣೆಗೈದರು. ಸನ್ಮಾನಕ್ಕೆ ಉತ್ತರಿಸಿದ ಪ್ರಕಾಶ ರಾವ್ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪನೆಯ ಹಿಂದಿನ ಉದ್ದೇಶ, ಅದು ಕಳೆದ ೨೫ ವರ್ಷಗಳಲ್ಲಿ ಸಾಧಿಸಿದ ಪ್ರಗತಿ, ಸ್ಥಾಪಿಸಿದ ದಾಖಲೆಗಳನ್ನು ಸ್ಮರಿಸಿ, ನೆರವಾದವರಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ಸ್ವಾಗತಿಸಿದರು. ಉಮೇಶ ವಂದಿಸಿದರು. ನಾಗೇಶ್ ನಿರೂಪಿಸಿದರು.

Exit mobile version