Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಗ್ರಾಮ ಪಂಚಾಯತ್ ಸಂಪೂರ್ಣ ಲಾಕ್‌ಡೌನ್: ಟಾಸ್ಕ್‌ಪೋರ್ಸ್ ಸಮಿತಿಯಿಂದ ವಾಹನ ತಪಾಸಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: 50ಕ್ಕೂ ಮಿಕ್ಕಿ ಕೋವಿಡ್ ಪಾಸಿಟಿವ್ ಇರುವ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶವನ್ನು ಜಿಲ್ಲಾಧಿಕಾರಿಯವರ ಆದೇಶದಂತೆ ಜೂ.10ರಿಂದ 14ರವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಂದು ಬೆಳಗಿನಿಂದ ಗಂಗೊಳ್ಳಿಯ ಮೇಲ್‌ಗಂಗೊಳ್ಳಿ ಬಳಿ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸಿದ ಗಂಗೊಳ್ಳಿ ಪೊಲೀಸರು ತುರ್ತು ಅಗತ್ಯ ವೈದ್ಯಕೀಯ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ಮಾಡಿಕೊಟ್ಟರು. ಸ್ಥಳೀಯ ಗ್ರಾಮ ಪಂಚಾಯತ್ ಟಾಸ್ಕ್‌ಪೋರ್ಸ್ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪೊಲೀಸರ ಸಹಕಾರದೊಂದಿಗೆ ಜನರ ಹಾಗೂ ವಾಹನಗಳ ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಿದರು. ಗಂಗೊಳ್ಳಿ ಪ್ರವೇಶಿಸುವವರಿಗೆ ಹಾಗೂ ಹೊರ ಹೋಗುವವರಿಗೆ ನಿರ್ಬಂಧ ಹೇರಲಾಗಿತ್ತು. ಸಂಪೂರ್ಣ ಲಾಕ್‌ಡೌನ್ ಹಿನ್ನಲೆಯಲ್ಲಿ ಜನರ ಮತ್ತು ವಾಹನ ಸಂಚಾರವಿಲ್ಲದೆ ಮುಖ್ಯರಸ್ತೆ ಬಿಕೋ ಎನ್ನುತ್ತಿತ್ತು. ಎಲ್ಲಾ ಸಹಕಾರಿ ಬ್ಯಾಂಕ್ ಮತ್ತು ಸೌಹಾರ್ದ ಸಹಕಾರಿಯನ್ನು ಮುಚ್ಚಲಾಗಿತ್ತು. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಅಂಚೆ ಕಛೇರಿ ತೆರೆದಿದ್ದರೂ ಯಾವುದೇ ವಹಿವಾಟು ನಡೆಸಲು ಅವಕಾಶ ಇರಲಿಲ್ಲ. ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಮೀನುಗಾರಿಕೆ ಚಟುವಟಿಕೆ ಕೂಡ ಸ್ಥಗಿತಗೊಂಡಿತ್ತು.

ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ ಗಂಗೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ನಂಜಾ ನಾಯ್ಕ್, ಪ್ರೊಬೇಷನರಿ ಎಸ್‌ಐ ವಿನಯ್ ನೇತೃತ್ವದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ವಂಡ್ಸೆ ಹೋಬಳಿ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಪಿಡಿಒ ಉಮಾಶಂಕರ ಮತ್ತಿತರರು ಉಪಸ್ಥಿತರಿದ್ದರು.

Exit mobile version