Kundapra.com ಕುಂದಾಪ್ರ ಡಾಟ್ ಕಾಂ

ನಿಮ್ಮ ತ್ವಚೆಯ ಹೊಳಪು ಹೆಚ್ಚಿಸಲು ಈ ಆಹಾರಗಳು ಸಹಕಾರಿ

ಚೆನ್ನಾಗಿ ಕಾಣಬೇಕೆಂದು ಅಂದುಕೊಳ್ಳುವುದು ಸಹಜ. ನಮ್ಮ ದೇಹದ ಸದೃಢತೆಗಾಗಿ ನಮ್ಮ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಲು ನಾವು ಹೇಗೆ ಕಷ್ಟ ಪಡುತ್ತವೆಯೋ ಅದೇ ರೀತಿ ನಮ್ಮ ಸೌಂದರ್ಯ ರಕ್ಷಣೆಗೆ ಹಲವು ವಿಧಾನಗಳಲ್ಲಿ ನಾವು ಪ್ರಯತ್ನ ಪಡುತ್ತೇವೆ. ನಮ್ಮ ತ್ವಚೆಯ ಹೊಳಪನ್ನು ಈ ಕೆಳಗಿನ ಹಲವಾರು ಆರೋಗ್ಯಕರ ನೈಸರ್ಗಿಕವಾದ ಆಹಾರಗಳನ್ನು ಸೇವನೆ ಮಾಡುವುದರಿಂದ ರಕ್ಷಣೆ ಮಾಡಿಕೊಳ್ಳಬಹುದು.

ಅವಕ್ಯಾಡೊ (ಬೆಣ್ಣೆ ಹಣ್ಣು):
ಅವಕ್ಯಾಡೊ ಹಣ್ಣುಗಳಲ್ಲಿ ಮನುಷ್ಯನ ದೇಹಕ್ಕೆ ಅವಶ್ಯವಾಗಿ ಬೇಕಾದ ಆರೋಗ್ಯಕರ ಕೊಬ್ಬಿನ ಅಂಶಗಳು ಸಿಗುತ್ತವೆ. ಇವು ನಮ್ಮ ತ್ವಚೆಯನ್ನು ಒಳಗಿನಿಂದಲೇ ಮಾಯಿಶ್ಚರೈಸರ್ ಮಾಡುತ್ತವೆ. ಅವಕ್ಯಾಡೊಗಳಲ್ಲಿ ಕಂಡು ಬರುವ ಹೆಚ್ಚಿನ ಪ್ರಮಾಣದ ಫ್ಯಾಟಿ ಆಸಿಡ್ ಅಂಶಗಳು, ಪ್ರೋಟೀನ್ ಅಂಶಗಳು, ಮತ್ತು ವಿಟಮಿನ್ ‘ ಎ ‘, ವಿಟಮಿನ್ ‘ ಡಿ ‘, ವಿಟಮಿನ್ ‘ ಇ ‘ ಜೀವ ಸತ್ವಗಳು ದೇಹದಲ್ಲಿ ಕೊಲಾಜೆನ್ ಅಂಶವನ್ನು ಉತ್ಪತ್ತಿ ಮಾಡಲು ಸಹಾಯ ಮಾಡುತ್ತವೆ. ದೇಹದ ಮೇಲ್ಭಾಗದಲ್ಲಿ ಅಂದರೆ ಚರ್ಮದ ಯಾವುದೇ ಭಾಗದಲ್ಲಿ ಕಂಡು ಬರುವ ಸುಕ್ಕುಗಳು, ಸಣ್ಣ ಸಣ್ಣ ಗೆರೆಗಳು ಇಲ್ಲವಾಗಬೇಕು ಎಂದರೆ ಕೊಲೆಜಿನ್ ಅಂಶ ಹೆಚ್ಚು ಉತ್ಪತ್ತಿ ಕಾಣಬೇಕು. ನಮ್ಮ ಮೂಳೆಗಳು ಮತ್ತು ಕೀಲುಗಳ ಸಮಸ್ಯೆಗಳು ಸಹ ಈ ಅಂಶದಿಂದ ದೂರವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾಗಿ ಅವಕ್ಯಾಡೊ ಹಣ್ಣಿನ ಸೇವನೆ ಅತ್ಯಗತ್ಯ.

ಸ್ಟ್ರಾಬೆರಿ ಹಣ್ಣುಗಳು:
ಸ್ಟ್ರಾಬೆರ್ರಿ ಹಣ್ಣುಗಳಲ್ಲಿ ವಿಟಮಿನ್ ‘ ಸಿ ‘ ಮತ್ತು ಫೋಲಿಕ್ ಆಸಿಡ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ದೇಹದ ಚರ್ಮದ ಮೇಲ್ಭಾಗದಲ್ಲಿ ಕಂಡು ಬರುವ ಸತ್ತ ಜೀವ ಕೋಶಗಳನ್ನು ತೆಗೆದು ಹಾಕಿ ಆರೋಗ್ಯಕರ ಚರ್ಮದ ಬೆಳವಣಿಗೆಯಲ್ಲಿ ಇದು ಸಹಾಯ ಮಾಡುತ್ತದೆ. ಪ್ರತಿ ದಿನ ನೀವು ಸ್ಟಾಬೆರಿ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ನಿಮ್ಮ ದಿನದ ಅಗತ್ಯತೆಗೆ ತಕ್ಕಂತೆ ನಿಮಗೆ ವಿಟಮಿನ್ ‘ ಸಿ ‘ ಅಂಶ ಸಿಗುತ್ತಾ ಹೋಗುತ್ತದೆ. ಇದರಿಂದ ನಿಮ್ಮ ತ್ವಚೆ ಹೊಳಪು ಕಾಣುತ್ತದೆ. ತ್ವಚೆಯ ಮೇಲ್ಭಾಗದಲ್ಲಿ ಯಾವುದೇ ಕಲೆಗಳು ಅಥವಾ ಸುಕ್ಕುಗಳು ಕಂಡು ಬರುವುದಿಲ್ಲ.
ಹೊಳಪಿನ ಮುಖ ನಿಮ್ಮದಾಗುವುದರ ಜೊತೆಗೆ ಯೌವನ ಭರಿತವಾದ ಸೌಂದರ್ಯ ನಿಮಗೆ ಸಿಗುತ್ತದೆ. ಸೂರ್ಯನ ಅತಿ ನೇರಳೆ ಕಿರಣಗಳಿಂದ ನಿಮ್ಮ ತ್ವಚೆಯನ್ನು ಕಾಪಾಡುವುದರಲ್ಲಿ ಸ್ಟ್ರಾಬೆರಿ ಹಣ್ಣುಗಳು ಸಹಾಯ ಮಾಡುತ್ತವೆ. ಏಕೆಂದರೆ ಈ ಹಣ್ಣುಗಳಲ್ಲಿ ಎಲ್ಲಾಜಿಕ್ ಆಮ್ಲ ಹೆಚ್ಚಾಗಿದೆ. ಇದು
ನಿಮ್ಮ ಸೌಂದರ್ಯಕ್ಕೆ ಕಾರಣವಾಗಿರುವ ಕೊಲಾಜೆನ್ ಎಂಬ ಅಂಶವನ್ನು ಹಾನಿ ಮಾಡುವ ಎಂಜೈಮ್ ಗಳ ಉತ್ಪತ್ತಿಯನ್ನು ತಡೆಯಾಗುತ್ತದೆ. ಇದರಿಂದ ನಿಮ್ಮ ಸೌಂದರ್ಯಕ್ಕೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ.

ಅಕಾಯ್:
ಅಕಾಯ್ ಕೂಡ ಒಂದು ಬೆರ್ರಿ ಹಣ್ಣಿನ ಜಾತಿಗೆ ಸೇರಿದ ಹಣ್ಣಾಗಿದ್ದು, ಇದರಲ್ಲಿ ಒಮೆಗಾ – 3, ಒಮೆಗಾ – 6 ಮತ್ತು ಒಮೇಗಾ – 9 ಅಂಶಗಳ ಮಹಾಪೂರವೇ ಅಡಗಿದ್ದು ನಿಮ್ಮ ಚರ್ಮದ ಭಾಗವನ್ನು ಒಳಗಿನಿಂದಲೇ ಮಾಯ್ಶ್ಚರೈಸ್ ಮಾಡಿ ಕಳೆಗಟ್ಟಿದ ಚರ್ಮವನ್ನು ಹೊಳಪಿನಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ. ಪ್ರತಿ ದಿನದ ನಿಮ್ಮ ಆಹಾರ ಪದ್ಧತಿಯಲ್ಲಿ ಅಕಾಯ್ ಹಣ್ಣನ್ನು ಸೇರಿಸಿಕೊಳ್ಳುವುದರಿಂದ ನಯವಾದ ಮತ್ತು ಮಗುವಿನ ರೀತಿಯ ಮೃದುವಾದ ಸುಂದರವಾದ ಚರ್ಮ ನಿಮ್ಮದಾಗುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಅಕಾಯ್ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ – ಆಕ್ಸಿಡೆಂಟ್ ಅಂಶಗಳು ಲಭ್ಯವಿರುವ ಕಾರಣ ಹೊರಗಿನ ಧೂಳು ಮತ್ತು ವಾತಾವರಣದ ಕಲುಷಿತ ಕಣಗಳಿಂದ ನಿಮ್ಮ ಚರ್ಮವನ್ನು ರಕ್ಷಣೆ ಮಾಡಿ ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕುತ್ತದೆ.

ಸೂರ್ಯಕಾಂತಿ ಬೀಜಗಳು:
ಈಗಾಗಲೇ ನಮ್ಮಲ್ಲಿ ಬಹುತೇಕ ಮಂದಿ ಅಡುಗೆಗೆ ಸೂರ್ಯಕಾಂತಿ ಎಣ್ಣೆ ಬಳಕೆ ಮಾಡುತ್ತೇವೆ. ಇದರಲ್ಲಿ ಪ್ರೋಟೀನ್ ಅಂಶಗಳು ಹೆಚ್ಚಾಗಿದೆ ಜೊತೆಗೆ ವಿವಿಧ ಖನಿಜಾಂಶಗಳಾದ ಕಬ್ಬಿಣ, ಮೆಗ್ನೀಷಿಯಂ ಮತ್ತು ಜಿಂಕ್ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ನಿಮ್ಮ ಚರ್ಮದ ಮೇಲಿನ ಕಪ್ಪು ಕಲೆಗಳನ್ನು ನಿವಾರಣೆ ಮಾಡುವ ಚರ್ಮದ ಭಾಗವನ್ನು ಕೊಲೆಸ್ಟ್ರಾಲ್ ಅಂಶದಿಂದ ಮುಕ್ತವಾಗಿ ನೋಡಿಕೊಳ್ಳುವ ಅತಿ ಹೆಚ್ಚು ಪೌಷ್ಟಿಕ ಸತ್ವಗಳು ನಿಮ್ಮ ತ್ವಚೆಗೆ ಲಭ್ಯವಾಗುತ್ತವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಸೂರ್ಯಕಾಂತಿ ಬೀಜಗಳಲ್ಲಿ ಕಂಡು ಬರುವ ವಿಟಮಿನ್ ‘ ಇ ‘ ಅಂಶದ ಜೊತೆಗೆ ತನ್ನಲ್ಲಿ ಆಂಟಿ – ಬ್ಯಾಕ್ಟೀರಿಯಲ್ ಮತ್ತು ಆಂಟಿ – ವೈರಲ್ ಗುಣ ಲಕ್ಷಣಗಳನ್ನು ಹೊಂದಿರುವ ಕಾರಣ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಅವರ ಚರ್ಮದ ಮೇಲೆ ಕಂಡು ಬರುವ ಮೊಡವೆಗಳು ಅಥವಾ ಗುಳ್ಳೆಗಳು ಬಹಳ ಬೇಗನೆ ನಿವಾರಣೆ ಆಗುತ್ತವೆ. ಚರ್ಮದ ಯಾವುದೇ ಸೋಂಕುಗಳು ಉಂಟಾಗದಂತೆ ಸೂರ್ಯಕಾಂತಿ ಬೀಜಗಳು ಪಾತ್ರ ವಹಿಸುತ್ತವೆ.

ಸಿಹಿ ಗೆಣಸು:
ಇದನ್ನು ಸಿಹಿ ಆಲೂಗಡ್ಡೆ ಎಂದು ಸಹ ಕರೆಯುತ್ತಾರೆ. ಬೀಟಾ – ಕ್ಯಾರೋಟಿನ್ ಎಂಬ ಅಂಶ ಸಿಹಿ ಗೆಣಸಿನಲ್ಲಿ ಹೆಚ್ಚು ಕಂಡು ಬರುತ್ತದೆ. ಇದು ವಿಟಮಿನ್ ‘ ಎ ‘ ಅಂಶವಾಗಿ ಬದಲಾಗಿ ನಿಮ್ಮ ಚರ್ಮವನ್ನು ಹಾನಿಕಾರಕ ಸೂರ್ಯನ ವಿಕಿರಣಗಳಿಂದ ರಕ್ಷಣೆ ಮಾಡಿ ವಾತಾವರಣದ ಬದಲಾವಣೆಯಿಂದ ಉಂಟಾಗುವ ಚರ್ಮದ ಸಮಸ್ಯೆಗಳನ್ನು ದೂರ ಮಾಡುತ್ತವೆ. ಉದಾಹರಣೆಗೆ ಕೆಲವರಿಗೆ ಚಳಿಗಾಲದಲ್ಲಿ ಚರ್ಮ ಒಡೆದು ಕೊಂಡಂತೆ ಆಗುತ್ತದೆ ಇನ್ನು ಕೆಲವರಿಗೆ ಚರ್ಮದ ಸೋಂಕು ಉಂಟಾಗುತ್ತದೆ ಡ್ರೈ ಸ್ಕಿನ್ ಹೊಂದಿರುವವರಿಗೆ ಚರ್ಮದ ಸಮಸ್ಯೆಗಳು ಹೆಚ್ಚು. ಆದರೆ ವಿಟಮಿನ್ ‘ ಸಿ ‘ ಮತ್ತು ವಿಟಮಿನ್ ‘ ಇ ‘ ಅಂಶ ದೇಹದಲ್ಲಿ ಕೊಲಾಜೆನ್ ಅಂಶವನ್ನು ಹೆಚ್ಚಾಗಿ ಉತ್ಪತ್ತಿ ಮಾಡಿ ಚರ್ಮದ ಭಾಗಕ್ಕೆ ಹೆಚ್ಚು ನೀರಿನ ಅಂಶವನ್ನು ಒದಗಿಸಿ ಚರ್ಮ ವ್ಯಾಧಿಗಳಿಂದ ದೂರ ಮಾಡಿ ಹೊಳಪಿನ ಚರ್ಮ ನಿಮ್ಮದಾಗುವಂತೆ ಮಾಡುತ್ತದೆ.

ಮೀನು:
ಮಾಂಸಾಹಾರ ಪ್ರಿಯರಿಗೆ ಮೀನು ಚರ್ಮದ ಸೌಂದರ್ಯಕ್ಕೆ ಹೇಳಿ ಮಾಡಿಸಿದ ಆಹಾರ ಎಂದು ತಿಳಿದು ಬಂದಿದೆ. ಸಮುದ್ರಾಹಾರಗಳಾದ ಸಾಲ್ಮನ್, ಮ್ಯಾಕೆರೆಲ್ ಮತ್ತು ಹೆರ್ರಿಂಗ್ ಮೀನುಗಳು ತಮ್ಮಲ್ಲಿ ಒಮೆಗಾ – 3 ಫ್ಯಾಟಿ ಆಸಿಡ್ ಅಂಶಗಳನ್ನು ಒಳಗೊಂಡಿರುವ ಕಾರಣ ಅತ್ಯಂತ ಸದೃಢವಾದ ಆರೋಗ್ಯ ಭರಿತವಾದ ಮತ್ತು ಪೌಷ್ಟಿಕ ಸತ್ವಗಳಿಂದ ಕೂಡಿದ ತ್ವಚೆ ನಿಮ್ಮದಾಗಲು ಸಹಾಯ ಮಾಡುತ್ತದೆ. ಎಣ್ಣೆಯ ಅಂಶವನ್ನು ಒಳಗೊಂಡ ಮೀನುಗಳ ಸೇವನೆಯಿಂದ ಒಣ ಚರ್ಮ ಮತ್ತು ಉರಿಯೂತದಿಂದ ಬಳಲುವ ಚರ್ಮದ ಸಮಸ್ಯೆಯನ್ನು ನೀವು ಹೋಗಲಾಡಿಸಿಕೊಳ್ಳಬಹುದು.

ಗಮನಿಸಬೇಕಾದ ಅಂಶ: ಆರೋಗ್ಯಕರ ಎಣ್ಣೆಯ ಅಂಶಗಳನ್ನು ಒಳಗೊಂಡ ಮೀನುಗಳನ್ನು ಸೇವನೆ ಮಾಡುವುದರಿಂದ ನಿಮಗೆ ಅತ್ಯದ್ಭುತ ಪ್ರಯೋಜನಗಳು ಸಿಗುತ್ತವೆ. ಗರ್ಭಿಣಿ ಮಹಿಳೆಯರ ಆರೋಗ್ಯ ರಕ್ಷಣೆ ಮಾಡುವುದರಿಂದ ಹಿಡಿದು ಸಾಮಾನ್ಯ ಜನರಿಗೆ ಮಾನಸಿಕ ಖಿನ್ನತೆಗೆ ಒಳಗಾಗುವ ಸಂಭವವನ್ನು ಇದು ತಪ್ಪಿಸುತ್ತದೆ ಮತ್ತು ಪ್ರತಿ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತದೆ.

ಡಾರ್ಕ್ ಚಾಕಲೇಟ್:
ಚಾಕಲೇಟ್ ನಲ್ಲಿ ಕೋಕೋ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಇದರಲ್ಲಿ ಶೇಕಡಾ 70% ಭಾಗದಷ್ಟು ಆಂಟಿ – ಆಕ್ಸಿಡೆಂಟ್ ಅಂಶಗಳು ಇರುವ ಕಾರಣ ಚರ್ಮದ ಬಣ್ಣ ಹೊಳಪಿನಿಂದ ಕೂಡಿರುವಂತೆ ಮಾಡಲು ಇದು ಹೆಚ್ಚು ಸಹಾಯಕವಾಗಿ ಕೆಲಸ ಮಾಡುತ್ತದೆ. ಚರ್ಮದ ಭಾಗದಲ್ಲಿ ರಕ್ತ ಸಂಚಾರ ಹೆಚ್ಚು ಮಾಡಿ ಚರ್ಮದ ಸೂಕ್ಷ್ಮತೆಯನ್ನು ಕಡಿಮೆ ಮಾಡುತ್ತದೆ. ಡಾರ್ಕ್ ಚಾಕಲೇಟ್ ನಲ್ಲಿ ವಿಟಮಿನ್ ‘ ಎ ‘, ವಿಟಮಿನ್ ‘ ಬಿ1 ‘, ವಿಟಮಿನ್ ‘ ಸಿ ‘, ವಿಟಮಿನ್ ‘ ಡಿ ‘ ಮತ್ತು ವಿಟಮಿನ್ ‘ ಇ ‘ ಅಂಶಗಳು ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂನಂತಹ ಖನಿಜಾಂಶಗಳು ಹೆಚ್ಚಾಗಿ ಕಂಡು ಬರುವುದರಿಂದ ಒಳಗಿನಿಂದಲೇ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ನೋಡಿಕೊಂಡು ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನವಾಗಿಸಿ ನಿಮ್ಮ ತ್ವಚೆಯ ಸದೃಢತೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.

ಕೆಂಪು ದ್ರಾಕ್ಷಿ ಹಣ್ಣುಗಳು:
ದ್ರಾಕ್ಷಿ ಹಣ್ಣಿನ ಸಿಪ್ಪೆ ನೋಡಲು ಕೆಂಪು ಬಣ್ಣದಿಂದ ಕೂಡಿದ್ದರೆ ಅದರಲ್ಲಿ ರೆಸ್ವೆರಾಟ್ರೋಲ್ ಎಂಬ ಸಂಯುಕ್ತ ಅಡಗಿರುತ್ತದೆ. ಈಗಿನ ಆಧುನಿಕ ಚರ್ಮದ ಆರೈಕೆ ಚಿಕಿತ್ಸೆಗಳಲ್ಲಿ ಎಲ್ಲಾ ಕಡೆ ಇದರ ಬಳಕೆ ಹೆಚ್ಚಾಗಿ ನಡೆಯುತ್ತಿದೆ. ಏಕೆಂದರೆ ರೆಸ್ವೆರಾಟ್ರೋಲ್ ಅಂಶ ದೇಹದಲ್ಲಿ ಅಂಗಾಂಗಗಳ ಹಾನಿಯನ್ನು ತಪ್ಪಿಸುತ್ತದೆ. ಚರ್ಮದ ಮೇಲೆ ಕಂಡು ಬರುವ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಮತ್ತು ಸೂರ್ಯನ ವಿಕಿರಣಗಳಿಂದ ಚರ್ಮದ ಮೇಲೆ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ. ಸಂಶೋಧನೆಗಳು ಹೇಳುವ ಪ್ರಕಾರ ಮಹಿಳೆಯರ ದೇಹದಲ್ಲಿ ಹೊಟ್ಟೆಯ ಭಾಗದಲ್ಲಿ, ಕರುಳು, ಲಿವರ್ ಮತ್ತು ಸ್ತನಗಳ ಭಾಗದಲ್ಲಿ ಬೆಳವಣಿಗೆಯಾಗುವ ಕ್ಯಾನ್ಸರ್ ಟ್ಯೂಮರ್ ಗಳನ್ನು ಇದು ತಡೆ ಹಾಕುತ್ತದೆ.

ವಾಲ್ನಟ್:
ವಾಲ್ನಟ್ ಗಳಲ್ಲಿ ಚರ್ಮಕ್ಕೆ ಸಂಬಂಧಿಸಿದಂತೆ ಅತ್ಯುತ್ತಮವಾದ ಅಂಶಗಳು ಸಿಗುತ್ತವೆ. ವಿಟಮಿನ್ ‘ ಇ ‘ ಅಂಶಗಳು ಅಪಾರ ಪ್ರಮಾಣದಲ್ಲಿ ವಾಲ್ನಟ್ ಗಳಲ್ಲಿ ಸಿಗುವುದರಿಂದ ನಿಮ್ಮ ಆಹಾರ ಪದ್ಧತಿಯಲ್ಲಿ ವಾಲ್ನಟ್ ಗಳನ್ನು ಸೇರಿಸಿ ಸೇವನೆ ಮಾಡುವುದರಿಂದ ಚರ್ಮದ ಮೇಲಿನ ಸತ್ತ ಜೀವ ಕೋಶಗಳು ನಿವಾರಣೆಯಾಗುತ್ತವೆ. ಇನ್ನು ಚರ್ಮದ ಮೇಲ್ಭಾಗದಲ್ಲಿ ಹೊರಗಿನ ವಾತಾವರಣದ ಪ್ರತಿಕೂಲತೆಯ ಕಾರಣದಿಂದ ಉಂಟಾಗುವ ಬ್ಲಾಕ್ಹೆಡ್ ಸಮಸ್ಯೆ ಮತ್ತು ಮೊಡವೆ ಗುಳ್ಳೆಗಳ ಸಮಸ್ಯೆ ವಾಲ್ನಟ್ ಗಳಿಂದ ಪರಿಹಾರವಾಗುತ್ತದೆ. ಫೇಸ್ ವಾಶ್ ಜೊತೆಗೆ ವಾಲ್ನಟ್ ಗಳು ಸೇರಿದ್ದರೆ ನಿಮ್ಮ ಚರ್ಮ ಸಾಕಷ್ಟು ತಾಜಾ ಆಗಿ ಇರುವುದರ ಜೊತೆಗೆ ಕಲ್ಮಶಗಳಿಂದ ನಿಮ್ಮ ತ್ವಚೆಯನ್ನು ರಕ್ಷಣೆ ಮಾಡಿಕೊಳ್ಳಲು ಸಾಕಷ್ಟು ನೆರವಾಗುತ್ತದೆ. ಒಂದು ವೇಳೆ ಚರ್ಮದ ಸೋಂಕುಗಳು ಹೆಚ್ಚಾಗಿ ಕಂಡು ಬಂದ ಸಮಯದಲ್ಲಿ ವಾಲ್ನಟ್ ಗಳನ್ನು ಪ್ರತಿ ದಿನ ಸೇವನೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ವಾಲ್ನಟ್ ಗಳ ಸೇವನೆಯಿಂದ ನಿಮ್ಮ ನೆತ್ತಿಯ ಭಾಗದಲ್ಲಿ ಫಂಗಸ್ ಬೆಳವಣಿಗೆ, ತಲೆ ಹೊಟ್ಟು, ಕೂದಲು ಉದುರುವಿಕೆ ಸಮಸ್ಯೆ ಎಲ್ಲವೂ ನಿವಾರಣೆಯಾಗುತ್ತದೆ. ಆರೋಗ್ಯಕರವಾದ ಮತ್ತು ಸದೃಡವಾದ ತಲೆ ಕೂದಲಿನ ಬೆಳವಣಿಗೆ ಕೆಲವೇ ದಿನಗಳಲ್ಲಿ ನಿಮಗೆ ಅನುಭವಕ್ಕೆ ಬರಲಿದೆ.

ಕುಂದಾಪ್ರ ಡಾಟ್ ಕಾಂ ಲೇಖನ

Exit mobile version