ಕುಂದಾಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಆರ್ಥಿಕ ನೀತಿಗಳನ್ನು ಖಂಡಿಸಿ ಮತ್ತು ಸರ್ಕಾರದ ಉದ್ದೇಶಿತ ‘ರಸ್ತೆ ಸಾರಿಗೆ ಸುರಕ್ಷತಾ ಮಸೂದೆ’ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನಿಡಿದ ಭಾರತ್ ಬಂದ್ ಗೆ ಕುಂದಾಪುರ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕುಂದಾಪುರ ನಗರದಲ್ಲಿ ಬೆಳಿಗ್ಗಿನಿಂದಲೇ ಸರಕಾರಿ ಮತ್ತು ಖಾಸಗಿ ಬಸ್, ರಿಕ್ಷಾ ಸಂಚಾರ ಸಂಪೂರ್ಣ ಸ್ಥಗಿಗೊಂಡಿದ್ದರೇ, ತಾಲೂಕಿನ ಕೆಲವೆಡೆ ಅಲ್ಲಲ್ಲಿ ರಿಕ್ಷಾಗಳ ಸಂಚಾರ ಕಂಡುಬಂತು. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಸಂಘ, ಆಸ್ಪತ್ರೆ, ಮೆಡಿಕಲ್, ಗ್ಯಾರೇಜ್, ಮುಂತಾದವುಗಳನ್ನು ಹೊರತುಪಡಿಸಿ ಕುಂದಾಪುರದ ತಾಲೂಕಿನ ಬಹುಪಾಲು ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ತಾಲೂಕಿನ ಬೈಂದೂರು, ಕೊಲ್ಲೂರು, ಶಿರೂರು, ಅಮಾಸೆಬೈಲು, ಶಂಕರನಾರಾಯಣ, ಶಿರೂರು ಸೇರಿದಂತೆ ಕೆಲವೆಡೆ ಕೆಲವು ಅಂಗಡಿಗಳು ಅರ್ಧ ಬಾಗಿಲು ತೆರೆದು, ಕೆಲವೆಡೆ ಸಂಪೂರ್ಣ ಬಾಗಿಲು ತೆರೆದು ವ್ಯವಹಾರ ನಡೆಸುತ್ತಿರುವುದು ಕಂಡುಬಂತು. ಅಕ್ಷರ ದಾಸೋಹ ನೌಕರರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಶಾಲೆಗಳಲ್ಲಿ ಬಿಸಿಯೂಟ ಇರಲಿಲ್ಲ. ಎಸ್.ಎಪ್.ಐ ವಿಧ್ಯಾರ್ಥಿ ಸಂಘಟನೆ ಬಂದ್ ಗೆ ಬೆಂಬಲ ಸೂಚಿಸಿತ್ತು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಬಸ್ಸಿಲ್ಲದೆ ಪರದಾಟ, ಶಾಲಾ ಕಾಲೇಜಿಗೆ ರಜೆ:
ಈ ದಿನ ಬಸ್ಸು ಇರುವುದಿಲ್ಲ ಎಂಬುದರ ಹೊರತಾಗಿಯೂ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ಚಿತ್ರಣ ಸಾಮಾನ್ಯವಾಗಿತ್ತು. ದೂರದ ಊರುಗಳಿಂದ ಬಂದವರು, ಕೊಲ್ಲೂರು ಮುಂತಾದ ಧಾರ್ಮಿಕ ಕ್ಷೇತ್ರಗಳ ದರ್ಶನಕ್ಕಾಗಿ ನಿನ್ನೆ ಬಸ್ಸಿನಲ್ಲಿ ಬಂದವರು ಇಂದು ಅಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಯಿತು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ಬಸ್ಸುಗಳು ಇಲ್ಲದ ಕಾರಣ ಸರಕಾರಿ ಶಾಲಾ-ಕಾಲೇಜುಗಳಿಗೆ ಅಘೋಷಿತ ರಜೆ ಸಾರಲಾಗಿತ್ತು. ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ನಿನ್ನೆಯೇ ಶಾಲೆಗಳಿಗೆ ರಜೆ ಘೋಷಿಸಿತ್ತು. ಉಳಿದಂತೆ ಅಂಬುಲೆನ್ಸ್, ಖಾಸಗಿ ವಾಹನಗಳು, ಲಾರಿ ಮುಂತಾದ ಗೂಡ್ಸ್ ಕ್ಯಾರಿಯರ್ ಸಂಚಾರ ಸಾಮಾನ್ಯವಾಗಿತ್ತು. (ಕುಂದಾಪ್ರ ಡಾಟ್ ಕಾಂ ಸುದ್ದಿ)
ತಲ್ಲೂರಿನಲ್ಲಿ ಕಾರಿಗೆ ಬಿತ್ತು ಕಲ್ಲು
ಮುರ್ಡೇಶ್ವರದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಇನೋವಾ ಕಾರನ್ನು ಅಡ್ಡಗಟ್ಟಿದ ಕಿಡಿಗೇಡಿಗಳು, ಮುಂಭಾಗದ ಗಾಜಿಗೆ ಕಲ್ಲು ಹೊಡೆದ ಘಟನೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕಾರನ್ನು ಸುತ್ತುವರಿದಿದ್ದ ಗುಂಪನ್ನು ಚದುರಿಸಿದ್ದಾರೆ.
ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿ:
ವರದಿ ಮಾಡಲೆಂದು ತೆರಳುತ್ತಿದ್ದ ಪತ್ರಕರ್ತರನ್ನು ಬಸ್ರೂರಿನಲ್ಲಿ ಅಡ್ಡಗಟ್ಟಿದ ಪ್ರತಿಭಟನಾ ನಿರತ ಸಂಘಟನೆಗಳು ಕಾರನಲ್ಲಿ ಸಂಚರಿಸಬೇಡಿ ಎಂದು ತಾಕೀತು ಮಾಡಿತು. ವರದಿ ಮಾಡುವ ಸಲುವಾಗಿ ತೆರಳುತ್ತಿರುವುದೆಂದು ಹೇಳಿದಾಗ್ಯೂ ಅವರನ್ನು ಹೋಗಲು ಬಿಡದಿದ್ದಾಗ ಕೂಡಲೇ ಕುಂದಾಪುರ ಉಪ ಅಧೀಕ್ಷಕರಿಗೆ ಪೋನಾಯಿಸಲಾಯಿತು. ಸ್ಥಳಕ್ಕಾಗಮಿಸಿದ ಅಧೀಕ್ಷಕರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕುಂದಾಪುರದಲ್ಲಿ ಪ್ರತಿಭಟನಾ ಮೆರವಣಿಗೆ, ರಸ್ತೆ ತಡೆ:
ಕುಂದಾಪುರ ತಾಲೂಕು ಸಿಐಟಿಯು ನೇತೃತ್ವದಲ್ಲಿ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವೃತ್ತದಿಂದ ಕುಂದಾಪುರ ನಗರದ ಮುಖ್ಯರಸ್ತೆಯಲ್ಲಿ ಸುತ್ತಿಬಂದ ಪ್ರತಿಭಟನಾಕಾರರು ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನು 5 ನಿಮಿಷಗಳ ಕಾಲ ಬಂದ್ ಮಾಡಿ ಬಳಿಕ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಕುಂದಾಪುರ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಸಿಐಟಿಯು ಅಧ್ಯಕ್ಷರಾದ ಹೆಚ್. ನರಸಿಂಹ, ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ಸಂಘಟನೆಯ ಪ್ರಮುಖರಾದ ರಾಜು ದೇವಾಡಿಗ, ಲಕ್ಷ್ಮಣ ಬರೆಕಟ್ಟು, ರಮೇಶ್ ವಿ. ಮೊದಲಾದವರು ಭಾಗವಹಿಸಿದ್ದರು.
ಬೈಂದೂರಿನಲ್ಲಿ ರಸ್ತೆ ತಡೆ:
ಸಿಐಟಿಯು ನೇತೃತ್ವದಲ್ಲಿ ಬೈಂದೂರು ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಯಿತು. ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಕಾರ್ಮಿಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಪ್ರಮುಖರಾದ ವೆಂಕಟೇಶ ಕೋಣಿ, ಗಣೇಶ್ ತೊಂಡೆಮಕ್ಕಿ, ಗಣೇಶ ಮೊಗವೀರ, ರೋನಿ ನಜ್ರತ್ ಪಡುವರಿ, ಮಂಜ ಪೂಜಾರಿ, ಮಂಜು ಪಡುವರಿ, ತಾಲೂಕಿ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ, ಶಾರದಾ ಬಿಜೂರು, ಸವಿತಾ ರಾಹುತನಕಟ್ಟೆ ಮೊದಲಾದವರು ಭಾಗವಹಿಸಿದ್ದರು.
ವಿವಿಧ ಕಾರ್ಮಿಕ ಸಂಘಟನೆಗಳ ಕಟ್ಟಡ ಕಾರ್ಮಿಕರು, ಅಕ್ಷರ ದಾಸೋಹದ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮುಂತಾದವರು ಪ್ರತಿಭಟನೆ ಬೆಂಬಲ ಸೂಚಿಸಿ ಭಾಗವಹಿಸಿದ್ದರು.
ದೇಶಾದ್ಯಂತ 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಈ ಮಷ್ಕರಕ್ಕೆ ಬೆಂಬಲ ನೀಡಿತ್ತು. ಕನಿಷ್ಠ 15 ಸಾವಿರ ರೂ. ಮಾಸಿಕ ವೇತನ ನೀಡಬೇಕು, ಎಲ್ಲ ರೀತಿಯ ದುಡಿಯುವ ವರ್ಗಕ್ಕೂ ಕನಿಷ್ಠ 3 ಸಾವಿರ ರೂ. ಪಿಂಚಣಿ ಕೊಡಬೇಕು, ಕಾರ್ಮಿಕ ಕಾನೂನಿಗೆ ತರಲುದ್ದೇಶಿಸಿರುವ ತಿದ್ದುಪಡಿಗಳನ್ನು ಕೈಬಿಡಬೇಕು, ಸರ್ಕಾರಿ ಕಂಪನಿಗಳಿಂದ ಬಂಡವಾಳ ಹಿಂತೆಗೆತ, ಖಾಸಗೀಕರಣ ನಿಲ್ಲಿಸಬೇಕು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಉದ್ಯೋಗ ಖಾತ್ರಿ ಒದಗಿಸಬೇಕು, ವಸತಿ ಹಕ್ಕು ನೀಡಬೇಕು, ದೇಶದ ಪ್ರತಿ ಜಿಲ್ಲೆಯಲ್ಲೂ ವಿಚಕ್ಷಣ ಸಮಿತಿ ರಚಿಸಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು, ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮದ ಮೂಲಕ ನಿರುದ್ಯೋಗ ತಡೆಯಬೇಕು, ಬೋನಸ್, ಪಿಎಫ್ ಪಡೆಯಲು ಇರುವ ವೇತನ ಮಿತಿ ತೆಗೆಯಬೇಕು, ಗ್ರಾಚ್ಯುಯಿಟಿ ಪ್ರಮಾಣ ಹೆಚ್ಚಿಸಬೇಕು, ರೈಲ್ವೆ, ವಿಮಾ ಮತ್ತು ರಕ್ಷಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಬಾರದು, ಅರ್ಜಿ ಸಲ್ಲಿಸಿದ 45 ದಿನಗಳ ಒಳಗೆ ಕಾರ್ಮಿಕ ಸಂಘಟನೆಗಳ ನೋಂದಣಿ ಮಾಡಬೇಕು, ಸರ್ಕಾರಿ ಕೆಲಸಗಳನ್ನು ಹೊರುಗುತ್ತಿಗೆ ನೀಡಬಾರದು, ಗುತ್ತಿಗೆ ನೌಕರರಿಗೂ, ಕಾಯಂ ನೌಕರರ ವೇತನ ಮತ್ತು ಇತರೆ ಸೌಲಭ್ಯ ನೀಡಬೇಕು ಇವೇ ಮುಂತಾದ ಬೇಡಿಕೆಗಳನ್ನಿಟ್ಟುಕೊಂಡು ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಬಂದ್ ನಡೆಸಿದ್ದವು.
ಕುಂದಾಪ್ರ ಡಾಟ್ ಕಾಂ- editor@kundapra.com