ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಸ್ತೆ ಬದಿಯ ನಾಯಿಗಳು ಸ್ವಲ್ಪ ಹಿಂದೆ ಬಂದರೆ ಸಾಕು ದೂರ ಓಡಿಸುವವರ ಮಧ್ಯೆ ಅಪಘಾತಕ್ಕೀಡಾಗ ಎರಡೂ ಕಾಲುಗಳ ಬಲಕಳೆದುಕೊಂಡು ಬಿದ್ದಿದ್ದ ನಾಯಿಮರಿಯೊಂದಕ್ಕೆ ವಿದ್ಯಾರ್ಥಿನಿಯೋರ್ವಳು ಮರುಜನ್ಮ ನೀಡಿದ್ದಾಳೆ. ಅನ್ನ ಆಹಾರ ನೀಡಿ ಸಲಹಿದ್ದಲ್ಲದೇ ತೆವಳಿಕೊಂಡು ಸಾಗುತ್ತಿದ್ದ ನಾಯಿಮರಿ ಮತ್ತದೆ ಹುಮ್ಮಸ್ಸಿನಿಂದ ಓಡಾಡುವಂತೆ ಮಾಡಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾಳೆ.
ತಾಲೂಕಿನ ಮೂಡ್ಲಕಟ್ಟೆ ಇಂಜನಿಯರಿಂಗ್ ಕಾಲೇಜಿನ ಎಂಬಿಎ ಅಂತಿಯ ವರ್ಷದ ವಿದ್ಯಾರ್ಥಿನಿ, ಹೊಸಂಗಡಿಯ ಕೆಪಿಸಿ ಉದ್ಯೋಗಿ ಕೆ. ರಾಮಸ್ವಾಮಿ ಅವರ ಮಗಳು ಪ್ರಿಯಾ ಎಂ.ಆರ್., ನಾಯಿ ಮರಿಗೆ ಮರುಜನ್ಮ ಪಾಲಿಸಿದ ಮಾತೃಹೃದಯಿ.
ಹೊಸಂಗಡಿ ಕೆಪಿಸಿ ಕ್ವಾಟ್ರಸ್ ಸಮೀಪ ಮೇ ತಿಂಗಳಿನಲ್ಲಿ ನಾಯಿ ಮರಿಯೊಂದು ಅಪಘಾತವಾಗಿ ಕೂಗುತ್ತಿರುವುದನ್ನು ಪ್ರೀಯಾ ನೋಡಿದ್ದಾರೆ. ತಮ್ಮ ಮನೆಯಿಂದ ಸ್ವಲ್ವ ದೂರದಲ್ಲಿ ಇದ್ದುದರಿಂದ ಇವರೇ ಅದಕ್ಕೆ ಆಹಾರವನ್ನು ನೀಡಿ ಬಂದಿದ್ದರು. ಮರುದಿನ ಆ ನಾಯಿ ಮರಿ ತೆವಳಿಕೊಂಡೇ ಪ್ರೀಯಾ ಅವರ ಮನೆಗೆ ಹಿಂಬಾಲಿಸಿ ಬಂದಿತ್ತು. ಈ ಹೊತ್ತಿಗಾಗಲೇ ನಾಯಿಮರಿಯ ಹಿಂದಿನ ಎರಡೂ ಕಾಲಿಗೆ ಗಂಭೀರ ಗಾಯಗೊಂಡದ್ದಲ್ಲದೇ, ಸೊಂಟದ ಭಾಗ ಬಲ ಕಳೆದುಕೊಂಡಿತ್ತು. ಹೀಗೆ ಬಂದ ನಾಯಿಮರಿಗೆ ಪ್ರಥಮ ಚಿಕಿತ್ಸೆ ನೀಡಿ ಮನೆಯಲ್ಲೆ ಉಳಿಸಿಕೊಂಡು ಆರೈಕೆ ಮಾಡಿದರು. ಚಿಕಿತ್ಸೆಗೆ ಸ್ಪಂದಿಸಿದ ನಾಯಿ ಚೇತರಿಕೆ ಕಂಡರೂ ಓಡಾಡಲು ಆಗುತ್ತಿರಲಿಲ್ಲ.
ತೆವಳುತ್ತಿದ್ದ ನಾಯಿಯನ್ನು ಓಡುವಂತೆ ಮಾಡಿದ ಪ್ರೀಯಾ:
ನಾಯಿ ಮರಿಯ ಯಾತನೆ ನೋಡಿ ಮರುಗಿದ ಪ್ರೀಯಾ ತನ್ನ ತಂದೆಯ ಸಹಕಾರದೊಂದಿಗೆ ಅದು ಮತ್ತೆ ಓಡಾಡುವಂತೆ ಮಾಡಿದ್ದಾರೆ. ದುಬಾರಿ ಬೆಲೆಯ ಉಪಕರಣಗಳನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ತಾವೇ ಯುಟ್ಯೂಬ್ ವಿಡಿಯೋ ಸಹಕಾರದಿಂದ ನಾಯಿ ಸಂಚರಿಸಲು ಗಾಲಿಯೊಂದನ್ನು ತಯಾರಿಸಿದ್ದಾರೆ.
ಎರಡು ಉದ್ದದ ಪಿಯುಸಿ ಪೈಪಿಗೆ ಹೊಟ್ಟೆ ಕೆಳಭಾಗಕ್ಕೆ ವೀ ಬೆಂಡ್ ಮತ್ತು ಹಿಂಭಾಗದಲ್ಲಿ ಬೆಂಡ್ ಪೈಪ್ ಜೋಡಿಸಿ ಸೊಂಟದ ಎರಡೂ ಬದಿಯಲ್ಲಿ ಪೈಪ್ ಜೋಡಿಸಿದರು. ನೆಲಕ್ಕೆ ಮುಖಮಾಡಿದ ಪೈಪಿಗೆ ಎರಡೂ ಕಡೆ ತೂತು ಕೊರೆದು ಬೋಲ್ಟ್ ನಟ್ ಅಳವಡಿಸಿ ಗಾಲಿ ಜೋಡಿಸಿ, ಕತ್ತಿನ ಬಳಿ ಬೆಲ್ಟ್ ಹಾಕಿ ಎದೆ ಭಾಗದಲ್ಲಿ ಬಿಗಿದು, ಹಿಂಗಾಲು ಬೆನ್ನಿನ ಹಿಂದಿನ ಪೈಪಿಗೆ ಆತುಕೊಳ್ಳುವಂತೆ ಮಾಡಿದರು. ಗಾಲಿಗಾಡಿ ನಾಯಿಗೆ ಕಟ್ಟಿ ಓಡಾಟ ಅಭ್ಯಾಸ ಕೂಡಾ ಮಾಡಿಸಿದರು. ನಾಯಿ ಈಗ ಗಾಲಿ ಗಾಡಿಯಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತದೆ. ಪ್ರಿಯಾ ಅವರನ್ನು ಹಿಂಬಾಲಿಸುತ್ತದೆ.
ಬೀದಿನಾಯಿಗೆ ಆರೈಕೆ ಮಾಡಿ ಅದಕ್ಕೆ ಮರುಜನ್ಮವನ್ನೇ ನೀಡಿದ ಪ್ರೀಯಾ ಅವರ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೊದಲಿಗೆ ನಾಯಿಯ ಯಾತನೆ ಕಂಡು ಬಳಿಕ ಅದು ಗಾಲಿಯ ಸಹಕಾರದೊಂದಿಗೆ ಓಡಾಡುತ್ತಿರುವುದನ್ನು ಕಂಡರೆ ಆರೈಕೆ ಮಾಡಿದವರ ಬಗ್ಗೆ ಒಂದು ಕೃತಜ್ಞತಾ ಭಾವ ಆವರಿಸಿಕೊಳ್ಳುವುದು ಸುಳ್ಳಲ್ಲ.