Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್‌ನಲ್ಲಿ ವಿದ್ಯಾರ್ಥಿ ಲಸಿಕಾ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಕರ್ನಾಟಕ ಸರಕಾರದ ವಿದ್ಯಾರ್ಥಿ ಲಸಿಕಾ ಅಭಿಯಾನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಶೀಲ್ಡ್ ಲಸಿಕೆ ವಿತರಿಸಲಾಯಿತು. ಆಳ್ವಾಸ್ ಕಾಲೇಜು ಸೇರಿದಂತೆ ಮೂಡುಬಿದಿರೆಯ ವಿವಿಧ ಕಾಲೇಜುಗಳ ಸುಮಾರು 1616 ವಿದ್ಯಾರ್ಥಿಗಳು ಲಸಿಕೆಯ ಪ್ರಥಮ ಡೋಸ್ ಪಡೆದರು.

ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಪುರಸಭೆ ಅಧಿಕಾರಿ ಇಂದು, ಎಂ.ಸಿ.ಎಸ್. ಬ್ಯಾಂಕ್‌ನ ಅಧ್ಯಕ್ಷ ಬಾಹುಬಲಿಪ್ರಸಾದ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಲಸಿಕಾ ಅಭಿಯಾನದ ನೋಡಲ್ ಆಫೀಸರ್ ಡಾ. ಸುಭಾಷ್ ಶೆಟ್ಟಿ, ಡಾ.ಮನಿಷಾ, ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್ ಖಾದರ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಶ್ರೀಧವಳಾ ಕಾಲೇಜಿನ ಪ್ರಾಂಶುಪಾಲ ಡಾ.ಸುದರ್ಶನ್ ಅಭಿಯಾನದಲ್ಲಿ ಭಾಗಿಯಾಗಿದ್ದರು.

ಆಳ್ವಾಸ್ ಕಾಲೇಜಿನ ಸುಂದರಿ ಆನಂದ ಆಳ್ವ ಆವರಣದ ನುಡಿಸಿರಿ ವೇದಿಕೆಯಲ್ಲಿ ಲಸಿಕೆ ಅಭಿಯಾನದ ವ್ಯವಸ್ಥೆ ಮಾಡಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವೈದ್ಯಕೀಯ ವೃಂದ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಅಭಿಯಾನದ ಸುವ್ಯವಸ್ಥೆಯನ್ನು ನೋಡಿಕೊಂಡರು.

ಜೂನ್ 30ರಂದು ಮತ್ತೊಂದು ಲಸಿಕಾ ಶಿಬಿರವನ್ನು ಆಯೋಜಿಸಲಾಗಿದ್ದು, 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಶಿಬಿರದ ಸುವ್ಯವಸ್ಥೆ ಕಾಪಾಡಲು ಟೋಕನ್ ವ್ಯವಸ್ಥೆ ಇರಲಿದ್ದು, ವಿದ್ಯಾರ್ಥಿಗಳು ಕಾಲೇಜು ಐಡಿಯನ್ನು ಕಡ್ಡಾಯವಾಗಿ ತರಲು ತಿಳಿಸಲಾಗಿದೆ.

Exit mobile version