Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು, ನಾವುಂದ ಪದವಿ ಕಾಲೇಜುಗಳಲ್ಲಿ ಲಸಿಕಾ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ನಾವುಂದ ರಿಚರ್ಡ್ ಆಲ್ಮೇಡ ಮೆಮೋರಿಯಲ್ ಕಾಲೇಜಿನ ಒಟ್ಟು 380 ವಿದ್ಯಾರ್ಥಿಗಳಿಗೆ ಸೋಮವಾರ ಮೊದಲ ಹಂತದ ಕೋವಿಡ್-19 ಸೋಂಕು ತಡೆ ಲಸಿಕೆ ನೀಡಲಾಯಿತು.

ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಬೈಂದೂರು ಕಾಲೇಜಿನಲ್ಲಿ ಮತ್ತು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ನಾವುಂದ ಕಾಲೇಜಿನಲ್ಲಿ ಲಸಿಕೆ ಅಭಿಯಾನ ನಡೆಸಿದರು. ನಾವುಂದದಲ್ಲಿ 130 ವಿದ್ಯಾರ್ಥಿಗಳು ಮತ್ತು ಬೈಂದೂರಿನಲ್ಲಿ 250 ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡರು. ಎರಡೂ ಕಡೆ ಕೊವ್ಯಾಕ್ಸೀನ್ ಲಸಿಕೆ ನೀಡಲಾಯಿತು.

ನಾವುಂದ ಕಾಲೇಜಿನಲ್ಲಿ ಪ್ರಾಂಶುಪಾಲ ಪ್ರೊ. ಜಿ. ಎಸ್. ಹೆಗಡೆ ಮತ್ತು ಬೈಂದೂರು ಕಾಲೇಜಿನಲ್ಲಿ ಪ್ರಾಂಶುಪಾಲ ಡಾ. ರಘು ನಾಯ್ಕ್ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿಗೆ ಅಗತ್ಯ ನೆರವು ಒದಗಿಸಲಾಯಿತು. ಇನ್ನು ಎರಡು ವಾರಗಳಲ್ಲಿ ಕಾಲೇಜು ಆರಂಭವಾಗಿ, ಭೌತಿಕ ತರಗತಿಗಳು ನಡೆಯಲಿವೆ. ಅದರ ಪೂರ್ವದಲ್ಲಿ ಲಸಿಕೆ ನೀಡಿ, ಕೋವಿಡ್ ತಗಲುವ ಭಯವನ್ನು ಕಡಿಮೆ ಮಾಡಿರುವುದಕ್ಕಾಗಿ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಬೈಂದೂರು ಕಾಲೇಜಿನ ಪ್ರಾಂಶುಪಾಲ ಡಾ. ರಘು ನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳನ್ನು ಅಲೆದಾಡಿಸದೆ, ಕಾಲೇಜಿನಲ್ಲೇ ಅತ್ಯಂತ ಅಚ್ಚುಕಟ್ಟಾಗಿ ಲಸಿಕೆ ಒದಗಿಸಿದ ಬಗ್ಗೆ ಜಿಲ್ಲಾಡಳಿತಕ್ಕೆ ಮತ್ತು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

Exit mobile version