Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಆರೋಗ್ಯ ಕೇಂದ್ರಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ, ಪುಡ್‌ಕಿಟ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಂಗಳವಾರ ಭೇಟಿ ನೀಡಿ ಕೋವಿಡ್ ವ್ಯಾಕ್ಸಿನೇಶನ್ ಬಗ್ಗೆ ಮಾಹಿತಿ ಪಡೆದುಕೊಂಡರು.

ಕರೋನಾ ವ್ಯಾಕ್ಸಿನ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡುವ ಕಾರ್ಯವನ್ನು ಚುರುಕುಗೊಳಿಸಬೇಕು. ಗ್ರಾಮದಲ್ಲಿರುವ 45 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಆಯಾ ಗ್ರಾಮಗಳಲ್ಲಿ ವ್ಯಾಕ್ಸಿನೇಶನ್ ಕ್ಯಾಂಪ್ ನಡೆಸಿ ಲಸಿಕೆ ನೀಡುವ ಕಾರ್ಯ ಮಾಡಬೇಕು. ಪ್ರತಿನಿತ್ಯ ಬೇಕಾಗುವ ಲಸಿಕೆಯನ್ನು ಪೂರೈಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಯವರಲ್ಲಿ ಮನವಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಜಿಲ್ಲಾಧಿಕಾರಿಯವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ಅವರು ಅಗತ್ಯ ಮಾಹಿತಿ ನೀಡಿದರು. ಕಾಂಗ್ರೆಸ್ ಮುಖಂಡರಾದ ಮಂಜುಳಾ ದೇವಾಡಿಗ, ಜಹೀರ್ ಅಹಮ್ಮದ್ ನಾಕುದಾ, ಮುಜಾಹಿದ್, ಗಂಗೊಳ್ಳಿ ಗ್ರಾಪಂ ಸದಸ್ಯ ದೇವು ಶಿಪಾ, ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.

ಆಶಾ ಕಾರ್ಯಕರ್ತರಿಗೆ ಆಹಾರದ ಕಿಟ್ ವಿತರಣೆ:
ಇದೇ ವೇಳೆ ಜೈನುಲ್ ಅಭಿದ್ದೀನ್ ನಾಕುದಾ ಅವರ ಪ್ರಥಮ ಪುಣ್ಯಸ್ಮರಣೆ ಪ್ರಯುಕ್ತ ಜಹೀದ್ ಅಹಮ್ಮದ್ ನಾಕುದಾ ಅವರು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ವಿತರಿಸಿದರು.

Exit mobile version