ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಟೈಮ್ಸ್ ಆಫ್ ಇಂಡಿಯಾ ನಡೆಸಿದ 2021ರ ಟೈಮ್ಸ್ ಇಂಜಿನಿಯರಿಂಗ್ ಇನ್ಸ್‌ಟಿಟ್ಯೂಟ್ ರ‍್ಯಾಂಕಿಂಗ್ ಸರ್ವೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ರಾಷ್ಟ್ರಮಟ್ಟದಲ್ಲಿ 147ನೇ ರ‍್ಯಾಂಕ್ ಪಡೆದಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಪ್ರತಿಷ್ಠಿತ ಸಮೀಕ್ಷೆಯಲ್ಲಿ ಎಐಇಟಿ ಈ ಅತ್ಯುನ್ನತ ಸ್ಥಾನ ಪಡೆದಿದೆ. ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅದ್ಭುತ ಸಾಧ್ಯತೆಗಳನ್ನು ಒದಗಿಸುತ್ತಿರುವ ಈ ಭಾಗದ ಪ್ರತಿಷ್ಠಿತ ಕಾಲೇಜುಗಳಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಒಂದಾಗಿದೆ.
ದೇಶದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜುಗಳನ್ನು ಗುರುತಿಸಿ ರ‍್ಯಾಂಕಿಂಗ್ ನೀಡುವುದು ಈ ಸಮೀಕ್ಷೆಯ ಆಶಯ. ಕಾಲೇಜಿನ ಮೂಲಸೌಕರ‍್ಯ, ಕುಶಲ ಉಪನ್ಯಾಸಕ ವೃಂದ, ಪಠ್ಯಕ್ರಮ, ಔದ್ಯೋಗಿಕ ಕ್ಷೇತ್ರದೊಡನೆಯ ಸಂಬಂಧ, ಬೋಧನ ಕ್ರಮ, ಸಂಶೋಧನೆಯ ವೈವಿಧ್ಯಮಯ ಸಾಧ್ಯತೆಗಳು, ಜಾಗತಿಕ ಮಟ್ಟದ ಅವಕಾಶಗಳು, ಉದ್ಯೋಗಾವಕಾಶಗಳು ಮತ್ತು ಕಾಲೇಜಿನ ಒಟ್ಟು ಬ್ರ್ಯಾಂಡ್ ಮೌಲ್ಯ ಈ ಸಮೀಕ್ಷೆಯ ವಿವಿಧ ಮಾನದಂಡಗಳಾಗಿದ್ದವು. ಈ ಮಾನದಂಡಗಳ ಆಧಾರದ ಮೇಲೆ ಅತ್ಯುತ್ತಮ ಕಾಲೇಜಿನ ಸೂಚ್ಯಂಕವನ್ನು ನೀಡಲಾಗಿದೆ.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಉತ್ಕೃಷ್ಟ ಗುಣಮಟ್ಟದ ಸಂಶೋಧನಾ ವಿಭಾಗವನ್ನು ಹೊಂದಿದ್ದು, ಕೆಸಿಟಿಯು ಮತ್ತು ವಿಜಿಎಸ್‌ಟಿಯಿಂದ ನಾಲ್ಕು ಕೋಟಿ ರೂ. ಗಿಂತಲೂ ಅಧಿಕ ರಿಸರ್ಚ್ ಗ್ರ್ಯಾಂಟ್ ಪಡೆದುಕೊಂಡಿದೆ. ಕಾಲೇಜಿನಲ್ಲಿ ಪಿಎಚ್‌ಡಿ ಪದವಿ ಪಡೆದ ೩೫ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳಿಗೆ ಸಂಶೋಧನಾ ಕ್ಷೇತ್ರದಲ್ಲಿ ನಿರಂತರ ಮಾರ್ಗದರ್ಶನ ನೀಡಲಾಗುತ್ತಿದೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಡಿಯಲ್ಲಿ ೭ ಸಂಶೋಧನಾ ವಿಭಾಗಗಳಿದ್ದು, ಪ್ರತಿವರ್ಷವೂ ೩೫೦ಕ್ಕೂ ಹೆಚ್ಚು ಸಂಶೋಧನೆಗಳನ್ನು ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಪ್ರಕಟಿಸಲಾಗಿದೆ.
ಇಸ್ರೋ, ಐಐಐಟಿ ಅಲಹಾಬಾದ್, ಎಸ್‌ಸಿಎಲ್ ಚಂಡೀಘರ್, ಡಿಐಎಟಿ ಪುಣೆ ಸೇರಿದಂತೆ ೪೨ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳೊಡನೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಶೈಕ್ಷಣಿಕ ಒಡಂಬಡಿಕೆಗಳನ್ನು ಹೊಂದಿದೆ. ವಿದ್ಯಾರ್ಥಿಗಳ ಇಂಟರ್ನ್‌ಶಿಪ್, ಪ್ರೊಜೆಕ್ಟ್ ವರ್ಕ್, ಸಂಶೋಧನಾ ಚಟುವಟಿಕೆಗಳು ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಈ ಒಡಂಬಡಿಕೆಗಳು ಪೂರಕವಾಗಿವೆ. ಕಾಲೇಜಿನ ವಿದ್ಯಾರ್ಥಿಗಳು 7 ಪೇಟೆಂಟ್‌ಗಳನ್ನು ಪಡೆದಿದ್ದು, 2020ರ ವರ್ಷದಲ್ಲಿ ಕೈಗೊಂಡ 10 ಪೇಟೆಂಟ್‌ಗಳ ಸಂಶೋಧನಾ ಕಾರ‍್ಯ ಪ್ರಗತಿಯಲ್ಲಿದೆ. ಎಐಇಟಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್‌ನ ಅದ್ಭುತ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಕೊರೊನಾದಂತಹ ಸವಾಲಿನ ಪರಿಸ್ಥಿಯ ಮಧ್ಯೆಯೂ 163ಕ್ಕೂ ಹೆಚ್ಚು ಕಂಪನಿಗಳನ್ನು ಕ್ಯಾಂಪಸ್‌ಗೆ ತರಲಾಗಿದ್ದು, 314 ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ ಪಡೆದಿದ್ದಾರೆ.
ಎಲ್ಲಾ ಇಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವು ಕಡಿಮೆಯಿದ್ದು, ಎಲ್ಲಾ ಆರ್ಥಿಕ ಸ್ತರಗಳ ವಿದ್ಯಾರ್ಥಿಗಳ ಕೈಗೆಟಕುವಂತಿದೆ. ಈ ಮೂಲಕ ಇಂಜಿನಿಯರಿಂಗ್ ಕನಸು ಕಾಣುವ ಪ್ರತಿಯೊಬ್ಬ ವಿದ್ಯಾರ್ಥಿಯ ಕನಸನ್ನು ನನಸಾಗಿಸಲು ಎಐಇಟಿ ಶ್ರಮಿಸುತ್ತಿದೆ.
ಇಂಜಿನಿಯರಿಂಗ್ ಕೋರ್ಸಿನ ಅಕ್ಯಾಡೆಮಿಕ್ಸ್‌ಗೆ ಪೂರಕವಾಗಿ ೪೦ ವಿದ್ಯಾರ್ಥಿ ಫೋರಂಗಳನ್ನು ರೂಪಿಸಲಾಗಿದೆ. ಎನ್‌ಸಿಸಿ, ಎನ್‌ಎಸ್‌ಎಸ್, ಎಸ್‌ಎಸ್‌ಬಿ, ಚಿರ್ಪ್-ಬರ್ಡ್ ಕ್ಲಬ್, ಸೃಷ್ಟಿ-ನೇಚರ್ ಕ್ಲಬ್, ರೋಸ್ಟ್ರಮ್-ಸ್ಪೀಕರ‍್ಸ್ ಕ್ಲಬ್ ಹೀಗೆ ವಿಭಿನ್ನ ಫೋರಂಗಳಿದ್ದು, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾಗಿವೆ.