Kundapra.com ಕುಂದಾಪ್ರ ಡಾಟ್ ಕಾಂ

ಬೆಂಗಳೂರು – ಕಾರವಾರ ರೈಲಿಗೆ ಮರುನಾಮಕರಣ: ಪಂಚಗಂಗಾವಳಿ ಸಮಿತಿ ಅಭಿನಂದನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಪ್ರಸಿದ್ಧ ಪಂಚಗಂಗಾವಳಿ ನದಿಗಳ ಮಹತ್ವ ದೇಶಕ್ಕೆ ತಿಳಿಯುವಂತೆ ಬೆಂಗಳೂರು -ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ‘ಪಂಚಗಂಗಾ ಎಕ್ಸ್‌ಪ್ರೆಸ್’ ಎಂದು ನಾಮಕರಣ ಮಾಡಿರುವುದಕ್ಕೆ ಪಂಚಗಂಗಾವಳಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಹಾಗೂ ಸಂಚಾಲಕ ಯು.ಎಸ್.ಶೆಣೈ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಯತ್ನ ನಡೆಸಿದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕುಂದಾಪುರ ಅವರಿಗೆ ಪಂಚಗಂಗಾವಳಿ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಪೌರಾಣಿಕ ಹಿನ್ನಲೆಯಿರುವ ಕುಂದಾಪುರದ ಪಂಚಗಂಗಾವಳಿ ನದಿಗಳಾದ ಸೌಪರ್ಣಿಕಾ, ಖೇಟ, ಚಕ್ರ, ಕುಬ್ಜ, ವಾರಾಹಿ ನದಿಗಳು ಮಲೆನಾಡಿನಿಂದ ಕುಂದಾಪುರ-ಬೈಂದೂರು ತಾಲ್ಲೂಕಿನ ಪ್ರದೇಶಗಳಲ್ಲಿ ಹರಿದು ಕುಂದಾಪುರ -ಗಂಗೊಳ್ಳಿ ನಡುವೆ ಪಂಚಗಂಗಾವಳಿಯಾಗಿ ಸಮುದ್ರ ಸೇರುತ್ತವೆ. ಪೂರ್ವದಿಂದ ಹರಿದು ಉತ್ತರ ದಿಕ್ಕಿಗೆ ಸಾಗಿ, ದಕ್ಷಿಣಕ್ಕೆ ಮರಳಿ ಪಶ್ಚಿಮದಲ್ಲಿ ಐದು ನದಿಗಳು ಒಂದಾಗಿ ಅರಭಿಸಮುದ್ರ ಸೇರುವ ಈ ನಡೆ ಪ್ರಪಂಚದ ನೈಲ್‌ನದಿ ಬಿಟ್ಟರೆ ಬೇರೆ ಎಲ್ಲೂ ಇಲ್ಲ. ಸುಮಾರು ಎರಡು ಸಾವಿರ ಗಿಡಮೂಲಿಕೆಗಳ ನಡುವೆ ಹರಿದು ಬರುವ ಈ ನದಿಯ ಬಗ್ಗೆ ಹಲವು ದೇಶ ಹಾಗೂ ಪಾಶ್ಚಾತ್ಯ ವಿದ್ವಾಂಸರು ಬರೆದಿದ್ದರೂ, ನಮ್ಮ ರಾಜ್ಯದ ಇತಿಹಾಸ ಪುಟಗಳಲ್ಲಿ ಪ್ರವಾಸೋದ್ಯಮ ಪುಸ್ತಕಗಳಲ್ಲಿ ಉಲ್ಲೇಖ ಆಗಿರಲಿಲ್ಲ. ಈ ಕಾರಣದಿಂದ 2009ರಿಂದ ಪಂಚಗಂಗಾವಳಿ ನದಿಗಳ ಮಹತ್ವ ತಿಳಿಸುವ ಕೆಲಸ ಪಂಚಗಂಗಾವಳಿ ಸಮಿತಿ ಮಾಡುತ್ತಿದೆ. ಈ ನದಿ ತಟದಲ್ಲಿರುವ ಹಲವಾರು ದೇವಾಲಯಗಳು, ದೈವಸ್ಥಾನಗಳು ದೇಶದಲ್ಲಿ ಪ್ರಸಿದ್ಧವಾಗಿದೆ. ಪ್ರಾಕೃತಿಕ ಸಂಪತ್ತಿಗೂ ದೇಶದ ಚಲನಚಿತ್ರ ನಿರ್ದೇಶಕರೂ ಮಾರು ಹೋಗಿದ್ದಾರೆ. ಆದರೆ ಸಮಿತಿ ಬೇಡಿಕೆ ಸಲ್ಲಿಸಿದಂತೆ ನಿರೀಕ್ಷಿತ ಅಭಿವೃದ್ಧಿ ಆಗಿರಲಿಲ್ಲ. ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸಿದ ಹಲವು ಪ್ರಸ್ತಾಪಗಳು ಇನ್ನೂ ಅನುಷ್ಠಾನಗೊಂಡಿಲ್ಲ.

ಈಗ ಕುಂದಾಪುರ ರೈಲು ಹಿತರಕ್ಷಣಾ ಸಮಿತಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಿ ಬೆಂಗಳೂರು -ಕಾರಾವಾರ ರೈಲಿಗೆ ‘ಪಂಚಗಂಗಾ ಎಕ್ಸ್‌ಪ್ರೆಸ್’ ಹೆಸರು ಇಡುವ ಮೂಲಕ ಮಹತ್ವದ ಕೆಲಸ ಮಾಡಿದೆ ಎಂದು ಪಂಚಗಂಗಾವಳಿ ಸಮಿತಿ ಅಭಿನಂದನೆ ಸಲ್ಲಿಸಿದೆ.

Exit mobile version