ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಪ್ರತಿಷ್ಠಿತ ಇಂಡಿಯಾ ಟುಡೇ ನಿಯತಕಾಲಿಕೆ ನಡೆಸಿದ ರಾಷ್ಟ್ರಮಟ್ಟದ ಸಮೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿವಿಧ ವಿಭಾಗಗಳು ಜತೆಗೆ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಅತ್ಯುನ್ನತ ಸ್ಥಾನ ಪಡೆದಿವೆ. ಅಖಿಲ ಭಾರತ ಮಟ್ಟದಲ್ಲಿ ಅತ್ಯುತ್ತಮ ಕಾಲೇಜುಗಳನ್ನು ಗುರುತಿಸುವುದಕ್ಕಾಗಿ ಪ್ರತೀವರ್ಷವೂ ಇಂಡಿಯಾ ಟುಡೆ ಸಮೀಕ್ಷೆಯನ್ನು ನಡೆಸುತ್ತಾ ಬಂದಿದ್ದು ಇದು 25ನೇ ವರ್ಷದ ಸಮೀಕ್ಷೆಯಾಗಿದೆ. ಇಂಡಿಯಾ ಟುಡೇ-2021ನ ಈ ಸರ್ವೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವಿವಿಧ ವಿಭಾಗಗಳು ದೇಶದಲ್ಲಿಯೇ ಅತ್ಯುನ್ನತ ಸಾಧನೆ ಮಾಡಿದ, ಕ್ಷಮತೆ ಹೊಂದಿದ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಕಲೆ, ವಿಜ್ಞಾನ, ವಾಣಿಜ್ಯ, ವೈದ್ಯಕೀಯ, ಕಾನೂನು, ಸಮೂಹಸಂವಹನ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕಂಪ್ಯೂಟರ್ ಅಪ್ಲಿಕೇಶನ್, ಹೊಟೇಲ್ ಮ್ಯಾನೇಜ್‌ಮೆಂಟ್ ಸೇರಿದಂತೆ ವಿವಿಧ 14 ವಿಭಾಗಗಳಲ್ಲಿ ಸಮೀಕ್ಷೆ ನಡೆಸಿದ್ದು, 112 ವೈವಿಧ್ಯಮಯ ಕಾರ‍್ಯ ಕ್ಷಮತೆಯ ಸೂಚಕಗಳನ್ನು ಗುಣಮಟ್ಟದ ಮಾಪನಕ್ಕಾಗಿ ಪರಿಗಣಿಸಲಾಗಿತ್ತು. ಈ ಸೂಚಕಗಳನ್ನೊಳಗೊಂಡಂತೆ ವಿದ್ಯಾರ್ಥಿ ದಾಖಲಾತಿ ಪ್ರಮಾಣ ಹಾಗೂ ಸಂಸ್ಥೆಯ ಆಡಳಿತ, ಶೈಕ್ಷಣಿಕ ಶ್ರೇಷ್ಠತೆ, ಮೂಲಭೂತ ಸೌಕರ‍್ಯ ನಿರ್ವಹಣೆ, ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣಗಳ ಬೆಳೆಸುವಿಕೆ, ವೃತ್ತಿಪರ ಪ್ರಗತಿ ಹಾಗೂ ಉದ್ಯೋಗಾವಕಾಶಗಳ ನಿರ್ಮಾಣ ಎಂಬ ಐದು ಪ್ರಮುಖ ಮಾನದಂಡಗಳ ಆಧಾರದಲ್ಲಿ ಕಾಲೇಜಿನ ಗುಣಮಟ್ಟವನ್ನು ನಿರ್ಧರಿಸಿ ಅತ್ಯುತ್ತಮ ಕಾಲೇಜಿನ ಸ್ಥಾನವನ್ನು ನೀಡಲಾಗಿದೆ.
ಈ ಸಮೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗಕ್ಕೆ ರಾಷ್ಟ್ರಮಟ್ಟದ ಸಮಗ್ರ ರ‍್ಯಾಂಕಿಂಗ್ ಪಟ್ಟಿಯಲ್ಲಿ 40ನೇ ಸ್ಥಾನ ಪಡೆದರೆ, ಕಾಲೇಜಿನ ಕಲಾ ವಿಭಾಗವು 124ನೇ ಸ್ಥಾನ, ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗವು131ನೇ ಸ್ಥಾನ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾವು 158ನೇ ಸ್ಥಾನ ಹಾಗೂ ವಾಣಿಜ್ಯ ವಿಭಾಗವು ೧೫೯ನೇ ಸ್ಥಾನ ಪಡೆದಿವೆ. ಜೊತೆಗೆ ಬೆಸ್ಟ್ ವ್ಯಾಲ್ಯೂ ಫಾರ್ ಮನಿ ಕೆಟಗರಿಯಲ್ಲಿ ಭಾರತದ ಟಾಪ್ ಟೆನ್ ಕಾಲೇಜುಗಳಲ್ಲಿ ೫ನೇ ಸ್ಥಾನ ಹಾಗೂ ಲೋವೆಸ್ಟ್ ಫೀಸ್ ಕೆಟಗರಿಯಲ್ಲಿ ಟಾಪ್‌ಟೆನ್ ಸ್ಥಾನಗಳಲ್ಲಿ ೮ನೇ ಸ್ಥಾನವನ್ನು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ತನ್ನದಾಗಿಸಿಕೊಂಡಿದೆ.
ಆಳ್ವಾಸ್ ಕಾಲೇಜು
ಸಮೀಕ್ಷೆ ಹೊಂದಿದ್ದ ವಿವಿಧ ಮಾನದಂಡಗಳಲ್ಲಿ ಆಳ್ವಾಸ್ ಕಾಲೇಜಿನ ವಿಭಾಗಗಳು ಉತ್ತಮ ಕ್ಷಮತೆಯನ್ನು ಪ್ರದರ್ಶಿಸಿವೆ. ಇದಕ್ಕೆ ಕಾರಣ ಕಾಲೇಜು ಅಳವಡಿಸಿಕೊಂಡಿರುವ ವಿನೂತನ ಕಲಿಕಾ ಮಾನದಂಡಗಳು. ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದ ಹಿತದೃಷ್ಟಿಯಿಂದ ‘ಶೇಪ್’ ಎಂಬ ಹೊಸ ಪರಿಕಲ್ಪನೆಯೊಂದಿಗೆ ಆಳ್ವಾಸ್ ಪದವಿ ಕಾಲೇಜು ಕಾರ‍್ಯ ನಿರ್ವಹಿಸುತ್ತಿದೆ. ಇಂದಿನ ಉದ್ಯೋಗ ಕ್ಷೇತ್ರ ಬೇಡುವ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಪ್ರಗತಿಪಡಿಸುವುದು ಇದರ ಮುಖ್ಯ ಉದ್ದೇಶ. ಉದ್ಯೋಗ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್, ಸಂಶೋಧನಾ ಕಾರ‍್ಯಗಳು, ಸಾರ್ವಜನಿಕ ಸೇವಾಕ್ಷೇತ್ರಕ್ಕಾಗಿ ಸಿದ್ಧತೆ, ವೃತ್ತಿಪರ ಕೋರ್ಸ್‌ಗಳ ಅಳವಡಿಕೆ, ಇಂಟರ್ನ್‌ಶಿಪ್ ಹಾಗೂ ಉದ್ಯಮಶೀಲತೆಯನ್ನು ಪರಿಚಯಿಸುವುದು ಈ ಪರಿಕಲ್ಪನೆಯ ತಳಹದಿ. ಇದರ ಆಧಾರದಲ್ಲಿ ಕಾಲೇಜಿನ ಎಲ್ಲ ವಿಭಾಗಗಳು ಕಾರ‍್ಯನಿರ್ವಹಿಸುತ್ತಿವೆ. ಕಳೆದ 13 ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ದಾಖಲೆಯ ಅತಿ ಹೆಚ್ಚು ರ‍್ಯಾಂಕ್‌ಗಳನ್ನು ಪಡೆಯುತ್ತ ಬಂದಿರುವುದು ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆಗೆ ಸಾಕ್ಷಿ. ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅದ್ಭುತ ಸಾಧನೆಯನ್ನು ತೋರಿಸಿದ್ದು ೧೫ ವರ್ಷಗಳಿಂದ ಈ ಕ್ಷೇತ್ರಗಳಲ್ಲಿ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊತೆಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಲೇಜನ್ನು ಪ್ರತಿನಿಧಿಸಿದ್ದಾರೆ. ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗುವಂತೆ ಗುಣಮಟ್ಟದ ಪ್ರಯೋಗಶಾಲೆಗಳು, ಕ್ರೀಡಾಂಗಣ, ಗ್ರಂಥಾಲಯ ಹಾಗೂ ಇತರೆ ಮೂಲಭೂತ ಸೌಕರ‍್ಯಗಳನ್ನು ಒದಗಿಸಲಾಗಿದೆ.
ಶೈಕ್ಷಣಿಕ ಅಧ್ಯಯನಕ್ಕೆ ಅನುಗುಣವಾಗಿ ಫೋಟೋಗ್ರಫಿ, ಫಿಲ್ಮ್‌ಮೇಕಿಂಗ್, ವಿಕಿಪೀಡಿಯ ಸಂಪಾದನೆ, ಆಧ್ಯಾತ್ಮ, ಮಾನವಸಂಪನ್ಮೂಲ, ಮನಶಾಸ್ತ್ರ, ಎನ್‌ಎಸ್‌ಎಸ್, ಎನ್‌ಸಿಸಿ, ರೋವರ‍್ಸ್-ರೇಂಜರ‍್ಸ್ ಹೀಗೆ ವಿಭಿನ್ನ ೩೨ ಫೋರಂಗಳನ್ನು ರೂಪಿಸಲಾಗಿದೆ. ಇದರ ಜೊತೆಗೆ ಡಿಜಿಟಲ್ ಬ್ಯಾಂಕಿಂಗ್, ಫಿನಾನ್ಶಿಯಲ್ ಆಂಡ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್, ಟೂರಿಸಂ ಮ್ಯಾನೇಜ್‌ಮೆಂಟ್, ಹ್ಯೂಮನ್ ರಿಸೋರ್ಸ್ ಆಂಡ್ ಎಂಪ್ಲಾಯಿ ರಿಲೇಶನ್ಸ್ ಮ್ಯಾನೇಜ್‌ಮೆಂಟ್ ವಿವಿಧ 21 ಪ್ರಮಾಣೀಕೃತ ಕೋರ್ಸ್‌ಗಳಿವೆ. ಎಲ್ಲ ವಿದ್ಯಾರ್ಥಿಗಳೂ ತಮ್ಮ ಶೈಕ್ಷಣಿಕ ಅಧ್ಯಯನದ ಜೊತೆಗೆ ಇತರೆ ಕ್ಷೇತ್ರಗಳಲ್ಲಿಯೂ ಅನುಭವ ಹೊಂದಬೇಕು ಎಂಬುದು ಈ ಫೋರಂ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳ ಆಶಯ. ತನ್ನ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಕಾಲೇಜು ಮುಂದಿದ್ದು, ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪನಿಗಳು ಕ್ಯಾಂಪಸ್ ಸೆಲೆಕ್ಷನ್‌ಗೆ ಬಂದಿವೆ. ಪದವಿ ಪೂರೈಸಿದ ಶೇ.60ರಷ್ಟು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.