Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ರಾಮಕೃಷ್ಣ ಕುಟೀರ: ವಿದ್ಯಾರ್ಥಿ ವೇತನ, ನೋಟ್‌ಪುಸ್ತಕ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಗಾಧ ಪ್ರತಿಭೆ ಇದ್ದು, ಸರಿಯಾದ ಮಾರ್ಗದಲ್ಲಿ ವಿನಿಯೋಗಿಸಿದರೆ ಉತ್ತಮ ಸಾಧನೆ ಮಾಡಬಹುದಾಗಿದೆ. ಪ್ರತಿಭೆ ಇದ್ದವರಿಗೆ ಒಂದಿಲ್ಲೊಂದು ರೂಪದಲ್ಲಿ ಸಹಕಾರ, ಮಾರ್ಗದರ್ಶನ ದೊರೆಯುತ್ತದೆ ಎಂದು ಉಡುಪಿ ಜಿಲ್ಲಾ ಶ್ರೀಮದ್ಭಗವದ್ದೀತಾ ಜಯಂತಿ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ಹೇಳಿದರು.

ಎಳಜಿತ ಶ್ರೀ ರಾಮಕೃಷ್ಣ ಕುಟೀರದಲ್ಲಿ ಭಾನುವಾರ ವಿದ್ಯಾನಿಧಿ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ ವಿದ್ಯಾವಂತರಾದಾಗಲೇ ಜಗತ್ತಿನೆದುರು ತಲೆಯೆತ್ತೆ ನಡೆಯಲು ಸಾಧ್ಯ. ಕೆಲವು ವರ್ಷಗಳ ಹಿಂದೆ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದ ಗ್ರಾಮದಲ್ಲಿ ಶ್ರೀ ರಾಮಕೃಷ್ಣ ಕುಟೀರದ ಮೂಲಕ ಹಲವಾರು ವಿದ್ಯಾರ್ಥಿಗಳು ಇಂದು ಉನ್ನತ ವ್ಯಾಸಂಗವನ್ನೂ ಪೂರೈಸಿರುವುದು ಗಮನಾರ್ಹ ಸಾಧನೆ. ಸ್ವಾಮಿ ಸತ್ಯಸ್ವರೂಪಾನಂದರ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ. ವಿದ್ಯಾರ್ಥಿ ವೇತನ ಪಡೆದು ಉತ್ತಮ ಶಿಕ್ಷಣ ಉದ್ಯೋಗ ಪಡೆದುಕೊಳ್ಳುವುದರ ಜತೆಗೆ ಇತರರಿಗೂ ಸಹಕಾರ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀ ರಾಮಕೃಷ್ಣ ಕುಟೀರದ ಸತ್ಯಸ್ವರೂಪಾನಂದ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿ ಕಳೆದ 20 ವರ್ಷಗಳಿಂದಲೂ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಗೆ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ. ಈ ಭಾರಿ ಶ್ರೀ ರಾಮಕೃಷ್ಣ ಕುಟೀರದಿಂದ 500 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒಂದೊಂದು ಸೆಟ್ ನೋಟ್‌ಪುಸ್ತಕಗಳನ್ನು ವಿತರಿಸಲಾಗಿದೆ. ಕೋವಿಡ್ ಸಮಯದಲ್ಲಿ ಈ ಭಾಗದ ಅಗತ್ಯವುಳ್ಳವರಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಸೇರಿದಂತೆ ಕುಟೀರದ ಮೂಲಕ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡಲಾಗಿತ್ತು. ದಾನಿಗಳ ನೆರವಿನಿಂದ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ ಎಂದರು.

ಈ ಸಂದರ್ಭ ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕಗಳನ್ನು ವಿತರಿಸಲಾಯಿತು. ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಟ್ರಸ್ಟೀ ವೆಂಕಟರಮಣ ಬಿಜೂರು, ಕಾರ್ಯವಾಹಕರಾದ ಆನಂದ ಮದ್ದೋಡಿ, ಕೇಶವ ನಾಯ್ಕ್ ಬಿಜೂರು ಉಪಸ್ಥಿತರಿದ್ದರು.

Exit mobile version