Kundapra.com ಕುಂದಾಪ್ರ ಡಾಟ್ ಕಾಂ

ಪತ್ರಿಕೆ, ಪೊಲೀಸರ ಹೆಸರಲ್ಲಿ ಯುವತಿಗೆ ಹಣ ನೀಡಲು ಬೆದರಿಕೆ, ಆರೋಪಿ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವತಿಯೊರ್ವಳಿಗೆ ಸಹಾಯ ಮಾಡುವುದಾಗಿ ನಂಬಿಸಿ, ಪತ್ರಿಕೆ ಹಾಗೂ ಪೊಲೀಸರ ಹೆಸರು ಬಳಿಸಿಕೊಂಡು ಹಣ ಪಡೆದು ವಂಚಿಸಿರುವ ಶೇಖರ ಬಳೆಗಾರ ಎಂಬುವವನ ವಿರುದ್ಧ ಬಗ್ಗೆ ಯುವತಿಯೊಬ್ಬಳು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

ಆಗಿದ್ದೇನು?
ನೆಂಚಾರು ಎಂಬಲ್ಲಿಯ ಯುವತಿ ಹಾಗೂ ಹಾಲಾಡಿಯ ಯುವಕನೋರ್ವ ಪರಸ್ಪರ ಪ್ರೀತಿಸುತ್ತಿದ್ದು ಬಳಿಕ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಯುವತಿ ಶಂಕರನಾರಾಯಣ ಠಾಣೆಯಲ್ಲಿ ಪಂಚಾಯತಿ ನಡೆದು ಇಬ್ಬರೂ ಪ್ರತ್ಯೇಕವಾಗಿದ್ದರು ಎನ್ನಲಾಗಿದೆ. ಕುಂದಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿದ್ದ ಯುವತಿಗೆ ಕಟ್ ಬೆಲ್ತೂರು ನಿವಾಸಿ ಶೇಖರ್ ಬಳೆಗಾರ್ ಆಸ್ಪತ್ರೆಗೆ ಬಂದಿದ್ದ ಈ ಸಂದರ್ಭ ಪರಿಚಯವಾಗಿದ್ದು, ತನ್ನ ಸಮಸ್ಯೆಯನ್ನು ಶೇಖರ್ ಬಳೆಗಾರನ ಬಳಿ ಹೇಳಿಕೊಂಡಿದ್ದಾಳೆ. ಇದನ್ನೇ ಅಸ್ತ್ರವಾಗಿಸಿಕೊಂಡ ಆತ ತನಗೆ ಅಧಿಕಾರಿಗಳು ಹಾಗೂ ಪತ್ರಿಕೆಯವರ ಸಂಪರ್ಕ ಇದೆ ಎಂದು ನಂಬಿಸಿ, ಅವರಿಗೆ ಹಣ ಕೊಡಬೇಕಾಗುತ್ತದೆ ಎಂದು ಹೇಳಿದ್ದು, ಮೂರು ಬಾರಿ ಒಟ್ಟು 95 ಸಾವಿರ ರೂಪಾಯಿ ಹಣ ಪಡೆದುಕೊಂಡಿದ್ದು ಇನ್ನೂ 1 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಅಷ್ಟು ಹಣ ಇಲ್ಲ ಎಂದಾಗ ಪತ್ರಿಕೆಯಲ್ಲಿ ನಿನ್ನ ಬಗ್ಗೆ ಬರೆಯಿಸಿ ಮಾರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆಂದು ಯುವತಿ ಶಂಕರನಾರಾಯಣ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಶಂಕರನಾರಾಯಣ ಪೊಲೀಸರು, ಶೇಖರ ಬಳೆಗಾರನನ್ನು ಶನಿವಾರ ಸಂಜೆ ಬಂಧಿಸಿದ್ದು, ಭಾನುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ಜಾಮೀನು ಮಂಜೂರಾಗಿದೆ.

Exit mobile version