ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ ರಾಘವೇಂದ್ರ ಹಾಗೂ ಬೈಂದೂರು ಶಾಸಕರ ಸಹಭಾಗಿತ್ವದಲ್ಲಿ ಸೇವಾ ಭಾರತಿ ಕರ್ನಾಟಕ, ಪ್ರೇರಣಾ ಟ್ರಸ್ಟ್ ಶಿವಮೊಗ್ಗ, ಪಿಇಎಸ್ ಶಿವಮೊಗ್ಗ ಹಾಗೂ ಆರೋಗ್ಯ ಇಲಾಖೆ ಉಡುಪಿ ಇವರ ಆಶ್ರಯದಲ್ಲಿ ಎಂಡೋಸಲ್ಪಾನ್ ಸಂತ್ರಸ್ತ ಕುಟುಂಬದವರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಶಿರೂರಿನಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಚಾಲನೆ ನೀಡಿದರು.
ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಹಿಮ್ಮೆಟ್ಟಿಸಲು ವಾಕ್ಸಿನ್ ಅಗತ್ಯವಾಗಿ ಪಡೆಯಬೇಕಿದೆ. ದೇಶಾದ್ಯಂತ ವಾಕ್ಸಿನ್ ನೀಡುವ ಕಾರ್ಯ ನಡೆಯುತ್ತಿದೆ. ವಾಕ್ಸಿನ್ ಪಡೆದವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಉದಾಹರಣೆಗಳು ಕಡಿಮೆ. ಮೂರನೇ ಅಲೆಯೂ ಕೂಡ ಬರಬಹುದೆಂದು ತಜ್ಞರ ಅಭಿಪ್ರಾಯವಿದೆ. ಈ ನಿಟ್ಟಿನಲ್ಲಿ ಎಂಡೋಸಲ್ಫಾನ್ ಪೀಡಿತರು ಹಾಗೂ ಅವರ ಆರೈಕೆದಾರರಿಗೆ ವಾಕ್ಸಿನ್ ನೀಡುವ ಸಲುವಾಗಿ ಲೋಕಸಭಾ ಸದಸ್ಯರ ಮುತುವರ್ಜಿಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಗೇರು ಪ್ಲಾಂಟೇಶನ್ ಇದ್ದು ಹೆಲಿಕಾಪ್ಟರ್ ಮೂಲಕ ಎಂಡೋಸಲ್ಪಾನ್ ಸಿಂಪಡಿಸಿದ್ದರಿಂದ ಈ ಸಮಸ್ಯೆ ತಲೆದೋರಿದೆ. ಬೈಂದೂರು ಕ್ಷೇತ್ರದಲ್ಲಿ 966 ಎಂಡೋ ಸಂತ್ರಸ್ತರಿದ್ದು ಸುಮಾರು 3000 ವ್ಯಾಕ್ಸಿನ್ ಅನ್ನು 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಮಾನಾಗಿ ಹಂಚಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಶಂಕರ್ ಪೂಜಾರಿ, ಮಾಜಿ ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಬೈಂದೂರು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ, ಸೇವಾಭಾರತಿ ಪ್ರಮುಖರಾದ ಪ್ರಸನ್ನ ಕುಮಾರ್, ರೂಪಲಕ್ಷ್ಮೀ ಶಿರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಸಹನಾ, ಡಾ. ನಂಬಿಯಾರ್, ಉದ್ಯಮಿ ವೆಂಕಟೇಶ್ ಕಿಣಿ, ಮಂಜುನಾಥ್, ನಾಗಶ್ರೀ ಇದ್ದರು. ತುಳಸೀದಾಸ್ ಸ್ವಾಗತಿಸಿ ನಿರೂಪಿಸಿದರು.