Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಖಾರ್ವಿ ಸಮಾಜದಲ್ಲಿ ಯಾವುದೇ ಬಿಕ್ಕಟ್ಟಿಲ್ಲ ಒಗ್ಗಟ್ಟಿದೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಖಾರ್ವಿ ಸಮಾಜದಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಸಮಾಜದ ಜನರ ನಡುವೆ ಯಾವುದೇ ಗೊಂದಲಗಳಿಲ್ಲ. ವೈಯಕ್ತಿಕ ಸಮಸ್ಯೆ ಹಿನ್ನೆಲೆಯಲ್ಲಿ ಇಡೀ ಸಮಾಜದ ದೂಷಣೆ ಮಾಡುವುದು ಸರಿಯಲ್ಲ ಎಂದು ಖಾರ್ವಿಕೇರಿ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಯಾನಂದ ಖಾರ್ವಿ ಹಾಗೂ ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ಅರುಣ್ ಖಾರ್ವಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ವಿದ್ಯಾರಂಗ ಮಿತ್ರ ಮಂಡಳಿಯಲ್ಲಿ ಆಯೋಜಿಸಿದ್ದ ಸಮಾಜದ ಮುಖಂಡರ ಸಭೆ ಬಳಿಕ ನಂತರ ಮಾತನಾಡಿ, ಸತೀಶ್ ಖಾರ್ವಿ ಕಜಕಿಸ್ಥಾನದಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಗೆ ಹಣಕಾಸಿನ ನೆರವು ಕೇಳಿದ್ದರು. ಆ ಸಂದರ್ಭದಲ್ಲಿ ವಿದ್ಯಾರಂಗ ಮಿತ್ರಮಂಡಳಿಯ ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣಕ್ಕಾಗಿ ಮುಂದಾಗಿದ್ದೆವು. ಅಲ್ಲದೆ ದಾನಿಗಳಿಂದ ವಂತಿಗೆ ಮಾಡುತ್ತಿದ್ದು ಹಣಕಾಸಿನ ಅಡಚಣೆ ಇದ್ದಿದ್ದರಿಂದ ಸತೀಶ್ ಅವರಿಗೆ ನೆರವು ನೀಡಲಾಗಲಿಲ್ಲ. ಕಜಕಿಸ್ಥಾನದಲ್ಲಿ ಗೆದ್ದು ಬಂದಾಗ ಅವರನ್ನು ಕುಂದಾಪುರದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡಿದ್ದಲ್ಲದೆ ವಿದ್ಯಾರಂಗದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿತ್ತು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಂಸ್ಥೆ ಕುರಿತು ನಿಂದನೆ ಮಾಡಿ ಮಾತನಾಡಿದರು. ಇದು ಜಾಲತಾಣಗಳಲ್ಲಿ ಚರ್ಚೆಯಾಗಿ ಪೊಲೀಸ್ ದೂರು ದಾಖಲಾಗಿ, ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು . ಅದೇ ಘಟನೆ ಇಟ್ಟುಕೊಂಡು ಸಮಾಜದ ಕುರಿತು ತಪ್ಪು ಅಭಿಪ್ರಾಯ ಮಾಡುವಂತಹ ಸಂದೇಶಗಳನ್ನು ಜಾಲತಾಣದಲ್ಲಿ ಮಾಡುತ್ತಿದ್ದು ಆ ಕುರಿತು ಸಮಾಜ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.

ಕುಂದಾಪುರ ಪುರಸಭಾ ಸದಸ್ಯ ಚಂದ್ರಶೇಖರ್ ಖಾರ್ವಿ, ದೇವಸ್ಥಾನದ ಉಪಾಧ್ಯಕ್ಷ ಗಣಪತಿ ಖಾರ್ವಿ, ವಿದ್ಯಾರಂಭ ಮಿತ್ರ ಮಂಡಳಿ ಕಾರ್ಯದರ್ಶಿ ಗಣೇಶ್ ನಾಯ್ಕ್, ಕುಂದಾಪುರ ಪುರಸಭೆ ಉಪಾಧ್ಯಕ್ಷ ಸಂದೀಪ ಖಾರ್ವಿ, ಮಾಜಿ ಅಧ್ಯಕ್ಷೆ ವಸಂತಿ ಸಾರಂಗ, ಚಿಪ್ಪು ಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ದನ ಪಟೇಲ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ದಿನಕರ ಪಟೇಲ್, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ್ ಖಾರ್ವಿ, ಮುಖಂಡರಾದ ನಾರಾಯಣ ಖಾರ್ವಿ, ರಾಘವೇಂದ್ರ ಖಾರ್ವಿ, ಜನಾರ್ದನ ಖಾರ್ವಿ, ದಿನೇಶ್ ಖಾರ್ವಿ ಉಪಸ್ಥಿತರಿದ್ದರು.

Exit mobile version