Kundapra.com ಕುಂದಾಪ್ರ ಡಾಟ್ ಕಾಂ

ನಿರಂತರ ಮಳೆಯಿಂದಾಗಿ ತುಂಬಿ ಹರಿದ ನದಿಗಳು. ತಗ್ಗು ಪ್ರದೇಶ ಜಲಾವೃತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದೊಂದು ವಾರಗಳಿಂದ ಸತತ ಮಳೆಯಾಗುತ್ತಿದ್ದು, ಭಾನುವಾರ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹಲವೆಡೆ ನದಿಗಳು ಉಕ್ಕಿ ಹರಿದಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಮಧ್ಯಾಹ್ನದ ವೇಳೆಗೆ ಮಳೆ ಕಡಿಮೆಯಾದ್ದರಿಂದ ನೆರೆಹಾವಳಿ ತಗ್ಗಿತ್ತು.

ಶನಿವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿದ್ದುದರಿಂದ ಭಾನುವಾರ ಬೆಳಿಗ್ಗೆ ಕುಂದಾಪುರ ತಾಲೂಕಿನ ಬಿಜಾಡಿ, ಕೋಟೇಶ್ವರ, ಬೈಂದೂರು ತಾಲೂಕಿನ ಉಪ್ಪಿನಕುದ್ರು, ಮರವಂತೆ, ನಾವುಂದ, ಕಿರಿಮಂಜೇಶ್ವರ, ಬಿಜೂರು, ಶಿರೂರು ಗ್ರಾಮಗಳು, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಲವೆಡೆ ನೆರೆ ನೀರು ನುಗ್ಗಿತ್ತು.

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮನೆ ಹಾನಿ, ಮನೆಗಳಿಗೆ ನೆರೆ ನೀರು ನುಗ್ಗಿರುವುದು, ಅಲ್ಲಲ್ಲಿ ಮರ ಉರಳಿರುವುದು ಸೇರಿದಂತೆ ಚಿಕ್ಕಪುಟ್ಟು ನೆರೆಹಾನಿಯಾಗಿದೆ. ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್ ಹಾಗೂ ಕುಂದಾಪುರ ತಹಶೀಲ್ದಾರ್ ಬಿ. ಆನಂದಪ್ಪ ನೆರೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಚಿಕ್ಕ ಮಳೆ ಬಂದರೂ ನೀರು ರಸ್ತೆ ಮೇಲೆ:
ಅರ್ಧ ಮಳೆಗಾಲವೇ ಬಂದರೂ ಈತನಕವೂ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿಗಳು ಎಚ್ಚೆತ್ತಂತೆ ಕಾಣುತ್ತಿಲ್ಲ. ಮಳೆಗಾಲ ಆರಂಭಕ್ಕೆ ಮೊದಲೇ ತೋಡುಗಳನ್ನು ಸ್ವಚ್ಛಗೊಳಿಸಬೇಕಿದ್ದ ಪಂಚಾಯತಿಗಳು ಈತನಕವೂ ಕೋವಿಡ್ ಮತ್ತಿತರ ಕಾರಣವೊಡ್ಡಿ ತೋಡುಗಳನ್ನು ಸ್ವಚ್ಛಗೊಳಿಸಿಲ್ಲ. ಹಾಗಾಗಿ ಚಿಕ್ಕ ಮಳೆ ಬಂದರೂ ರಸ್ತೆಯ ಮೇಲೆಯೇ ನೀರು ನಿಲ್ಲುವಂತಾಗಿದೆ. ಬೈಕ್ ಸವಾರರು, ರಸ್ತೆ ಪಕ್ಕದ ಮನೆಯವರು ಇದರಿಂದ ತೀರ ತೊಂದರೆ ಅನುಭವಿಸುವಂತಾಗಿದೆ.

ಇನ್ನೂ 3 ದಿನ ಮುಂದುವರಿಯಲಿದೆ ಮಳೆ:
ಜು.18 ಮತ್ತು 21ರವರೆಗೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ 18ರಿಂದ 19ರವರೆಗೆ ಆರೆಂಜ್‌ ಅಲರ್ಟ್ ಘೋಷಿಸಲಾಗಿದ್ದು, ಜುಲೈ 20 ಮತ್ತು 21ರಂದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Exit mobile version