ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಗತ್ತನ್ನು ಕಾಡಿದ ಕೋವಿಡ್ ಮಹಾಮಾರಿ, ವೈದ್ಯಕೀಯ ಸೌಲಭ್ಯ ಎಷ್ಟಿದ್ದರೂ ಸಾಲದು ಎಂಬ ಸತ್ಯವನ್ನು ಸಾರಿದೆ. ಸರ್ಕಾರದಿಂದ ಮಾತ್ರ ಇದರ ಕೊರತೆ ನೀಗಲು ಅಸಾಧ್ಯವಾಗಿರುವುದರಿಂದ ಜನರ ಕೊಡುಗೆ ಅಮೂಲ್ಯವೆನಿಸಿದೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ನಾವುಂದ-ಮರವಂತೆಯ ‘ನಮ್ಮ ಊರು-ನಮ್ಮ ಆರೋಗ್ಯ’ ಹೆಸರಿನ ವೃತ್ತಿಪರರ ತಂಡ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿತ್ತ ಆಕ್ಸಿಜನ್ ಕಾನ್ಸಂಟ್ರೇಟರ್ ಮತ್ತು ಆಮ್ಲಜನಕ ಸಿಲಿಂಡರ್ ಅನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ‘ನಮ್ಮ ಊರು-ನಮ್ಮ ಆರೋಗ್ಯ’ ತಂಡದ ಉಪಕ್ರಮವನ್ನು ಶ್ಲಾಘಿಸಿದ ಅವರು ಈ ಮಾದರಿ ಎಲ್ಲರಿಗೆ ಅನುಕರಣೀಯ ಎಂದರು.
‘ನಮ್ಮ ಊರು-ನಮ್ಮ ಆರೋಗ್ಯ’ ತಂಡ, ಗ್ರಾಮ ಪಂಚಾಯಿತಿ ಮತ್ತು ಮರವಂತೆಯ ಸೇವಾ ಸಂಘಟನೆಗಳು ಸಂಯುಕ್ತವಾಗಿ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಾಸಕರು ಕೇಂದ್ರಕ್ಕೆ ನೂತನ ಕಟ್ಟಡ ನಿರ್ಮಿಸುವ ಮತ್ತು ಹಗಲು-ರಾತ್ರಿ ಆರೋಗ್ಯ ಸೇವೆ ದೊರಕಿಸುವ ಭರವಸೆಯಿತ್ತರು.
ಸ್ವಾಗತಿಸಿ, ತಂಡವನ್ನು ಪರಿಚಯಿಸಿದ ತಂಡದ ಸದಸ್ಯ ವೆಂಕಟೇಶ ನಾವುಂದ, ತಂಡವು ಮರವಂತೆ ಆರೋಗ್ಯ ಕೇಂದ್ರಕ್ಕೆ ರೂ ೧ ಲಕ್ಷಕ್ಕೂ ಅಧಿಕ ಮೌಲ್ಯದ ಉಪಕರಣಗಳನ್ನು ಕೊಡುಗೆಯಾಗಿ ನೀಡಿದೆ ಎಂದರು.
ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಕೇಂದ್ರಕ್ಕೆ ಕೊಡುಗೆ ನೀಡಿದ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಆಸರೆ ಟ್ರಸ್ಟ್‌ನ ಟ್ರಸ್ಟಿ ಕರುಣಾಕರ ಆಚಾರ್ ನಿರೂಪಿಸಿದರು. ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ವಂದಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ ಖಾರ್ವಿ, ಮಾಜಿ ಅಧ್ಯಕ್ಷ ಹಾಗೂ ತಂಡದ ಸದಸ್ಯ ಎಸ್. ಜನಾರ್ದನ, ಸಂಘಟನೆಗಳ ಪ್ರಮುಖರು, ಆರೋಗ್ಯ ಸಿಬ್ಬಂದಿ ಇದ್ದರು.