Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾಗಿರಿಯಲ್ಲಿ ಬೃಹತ್ ಲಸಿಕಾ ಅಭಿಯಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಕರ್ನಾಟಕ ಸರಕಾರ 18 ವರ್ಷ ಮೇಲ್ಪಟ್ಟವರಿಗಾಗಿ ನಡೆಸುತ್ತಿರುವ ಬೃಹತ್ ಉಚಿತ ಲಸಿಕಾ ಅಭಿಯಾನದ ಅಂಗವಾಗಿ ವಿದ್ಯಾಗಿರಿಯ ನುಡಿಸಿರಿ ವೇದಿಕೆಯಲ್ಲಿ ಲಸಿಕೆ ನೀಡಲಾಯಿತು. ಜಿಲ್ಲಾಡಳಿತದ ಸಹಯೋಗದೊಂದಿಗೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ 18 – 44 ವರ್ಷದವರಿಗೆ ಆದ್ಯತೆ ಮೇರೆಗೆ ಬೃಹತ್ ಲಸಿಕಾ ಅಭಿಯಾನದಲ್ಲಿ 2832 ಜನರಿಗೆ ಲಸಿಕೆ ವಿತರಿಸಲಾಯಿತು.

ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಮುಲ್ಕಿ – ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, “ಸೌಟ್ಸ್ – ಗೈಡ್ಸ್ ಕನ್ನಡ ಭವನದಲ್ಲಿ ಜನರಿಗೆ ಉಚಿತ ಲಸಿಕೆ, ಕೊರೊನಾ ಪರೀಕ್ಷೆ ಹಾಗೂ ಸಮಾಲೋಚನೆ ನಡೆಸಲಾಗಿತ್ತು. ತಾಲೂಕಿನಲ್ಲಿ ತ್ವರಿತ ಗತಿಯಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಆರಂಭದಲ್ಲಿ ಲಸಿಕೆಯ ಬಗ್ಗೆ ಜನರಲ್ಲಿದ್ದ ಗೊಂದಲದಿಂದ ಹೆಚ್ಚಿನ ಜನರು ಲಸಿಕೆ ಪಡೆಯಲು ಹಿಂಜರಿದಿದ್ದರೂ, ಇದೀಗ ವ್ಯವಸ್ಥಿತವಾಗಿ ಕೊರೋನಾ ಎದುರಿಸಲು ಜನರು ಸಜ್ಜಾಗಿದ್ದಾರೆ. ಈ ಬಾರಿ ಲಸಿಕೆ ಸಿಗದವರಿಗೆ ಮುಂದಿನ ದಿನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಮಾತನಾಡಿ, ಕೊರೋನ ನಿಯಂತ್ರಣಕ್ಕೆ ವಿವಿಧ ಪ್ರಯತ್ನಗಳು ನಡೆಯುತ್ತಿದೆ. ಚಿಕಿತ್ಸೆಯ ಜತೆಗೆ ಸಮಾಲೋಚನೆಯನ್ನು ನಡೆಸಿ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮೂಡುಬಿದಿರೆ ಎಂಸಿಎಸ್ ಬ್ಯಾಂಕ್‌ನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಕೊರೊನಾ ನೋಡಲ್ ಅಧಿಕಾರಿ ಸುಧೀರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಇಂದು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿ ಶ್ರೀಪತಿ ಭಟ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಜನರು ಲಸಿಕಾ ಅಭಿಯಾನದಲ್ಲಿ ರಾಜ್ಯ ಕೊರೊನಾ ಮುಂಚೂಣಿಯ ಕಾರ್ಯಕರ್ತರಿಗೆ, ಸರಕಾರಿ ಸಿಬ್ಬಂದಿಗಳಿಗೆ, ಮಾನಸಿಕ ಅಸ್ವಸ್ಥರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ಆಸ್ಪತ್ರೆ ಸಿಬ್ಬಂದಿಗಳಿಗೆ, ಬ್ಯಾಂಕ್ ಉದ್ಯೋಗಿಗಳಿಗೆ, ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗಿತ್ತು. ಅಭಿಯಾನದ ಸುವ್ಯವಸ್ಥೆ ಕಾಪಾಡಲು ಟೋಕನ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜೊತೆಗೆ ಲಸಿಕೆ ಪಡೆದ ಬಳಿಕ ವಿಶ್ರಮಿಸಲು ವಿಶ್ರಾಂತಿ ವ್ಯವಸ್ಥೆ ಕೂಡ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವ ಮೂಲಕ ವ್ಯವಸ್ಥಿತ ಅಭಿಯಾನವನ್ನು ನಡೆಸಲು ಆಳ್ವಾಸ್ ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳು ಸಹಕರಿಸಿದರು. ಸರಕಾರಿ ವೈದ್ಯರ ತಂಡ ವೈದ್ಯಕೀಯ ಸೇವೆ ಒದಗಿಸಿತು.

Exit mobile version