ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರದ ಅಕ್ಷರ ದಾಸೋಹ – ಬಿಸಿಯೂಟ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುವ ಅಡುಗೆ ಎಣ್ಣೆ ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಕೋವಿಡ್-19 ಸಂದರ್ಭ ಸರಕಾರ ವಿದ್ಯಾರ್ಥಿಗಳಿಗೆ ವಿತರಿಸಲು ಸರಬರಾಜು ಮಾಡಿದ್ದ ಅಡುಗೆ ಎಣ್ಣೆ, ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ತಗ್ಗರ್ಸೆಯ ಅಂಗಡಿಯೊಂದರಲ್ಲಿ ಪತ್ತೆಯಾಗಿರುವುದು ಸಂಶಯಗಳಿಗೆ ಎಡೆಮಾಡಿಕೊಟ್ಟಿತ್ತು. ಗ್ರಾಹಕರೋರ್ವರು ಎಣ್ಣೆ ಪ್ಯಾಕೇಟ್ ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ.
ಬಿಸಿಯೂಟ ಯೋಜನೆಯ ಎಣ್ಣೆ ಅಂಗಡಿಗಳಲ್ಲಿ ಮಾರಾಟಕ್ಕೆ ಬಂದಿದ್ದು ಹೇಗೆ ಎಂಬುದು ತನಿಕೆಯಿಂದ ತಿಳಿದುಬರಬೇಕಿದೆ. ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಹೆಚ್. ಅವರು ಸ್ಥಳಕ್ಕೆ ಭೇಟಿ ನೀಡಿ ತನಿಕೆ ನಡೆಸಿದ್ದಾರೆ /ಕುಂದಾಪ್ರ ಡಾಟ್ ಕಾಂ ಸುದ್ದಿ/
ಸರಕಾರದ ಉಚಿತ ಅಡುಗೆ ಎಣ್ಣೆ ವಿಕ್ರಯವಾಗುತ್ತಿರುವ ಬಗ್ಗೆ ದೂರ ಬಂದ ತಕ್ಷಣ, ತಗ್ಗರ್ಸೆಯ ಅಂಗಡಿ ಹಾಗೂ ಸಮೀಪದ ಎರಡು ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿರುವ ಪಟ್ಟಿ ಹಾಗೂ ಬಾಕಿ ಇರುವ ಸ್ಟಾಕ್ ಚೆಕ್ ಮಾಡಲಾಗಿದ್ದು ಯಾವುದೇ ವ್ಯತ್ಯಯ ಕಂಡುಬಂದಿಲ್ಲ. ಅಂಗಡಿ ಮಾಲಿಕನಿಗೆ ಯಾರು ಅಡುಗೆ ಎಣ್ಣೆ ಪ್ಯಾಕೇಟ್ ನೀಡಿದ್ದಾರೆ ಎಂಬ ಬಗ್ಗೆ ತನಿಕೆ ನಡೆಸಿದ್ದು, ಪ್ಯಾಕೇಟ್ ನೀಡಿದವರು ಹಾಗೂ ಅಂಗಡಿ ಮಾಲಿಕನ್ನು ವಿಚಾರಣೆಗೆ ಕರೆಯಲಾಗಿದೆ. ಬೈಂದೂರು ಮುಖ್ಯಾಧಿಕಾರಿಗಳು ಹಾಗೂ ಬಿಇಓ ಅವರ ಗಮನಕ್ಕೂ ತರಲಾಗಿದ್ದು ವರದಿ ನೀಡುವಂತೆ ತಿಳಿಸಿದ್ದೇನೆ – ಶೋಭಾಲಕ್ಷ್ಮೀ ಹೆಚ್. ಎಸ್. ತಹಶೀಲ್ದಾರರು ಬೈಂದೂರು
Kundapraa.com