Kundapra.com ಕುಂದಾಪ್ರ ಡಾಟ್ ಕಾಂ

ವಿವೇಕ ಮಹಾಲೆ, ಶೇಷಗಿರಿ ಮುಂಡಳ್ಳಿ, ಸದಾಶಿವ ಎಂ.ಎಸ್.ಗೆ ‘ಟ್ಯಾಗೋರ್ ಪತ್ರಿಕಾ ಪ್ರಶಸ್ತಿ’

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ:
ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡಲ್ಪಡುವ ಈ ಸಾಲಿನ ‘ಟ್ಯಾಗೋರ್ ಪತ್ರಿಕಾ ಪ್ರಶಸ್ತಿ’ ಘೋಷಣೆಯಾಗಿದ್ದು, ಈ ಬಾರಿ ಈ ಪ್ರಶಸ್ತಿಗೆ ‘ವಿಜಯ ಕರ್ನಾಟಕ’ ಶಿವಮೊಗ್ಗ ಬ್ಯೂರೋ ಮುಖ್ಯಸ್ಥ ವಿವೇಕ ಮಹಾಲೆ, ‘ದಿಗ್ವಿಜಯ ನ್ಯೂಸ್’ನ ಉತ್ತರಕನ್ನಡ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ ಹಾಗೂ ‘ಪ್ರಜಾವಾಣಿ’ ಉತ್ತರಕನ್ನಡ ಜಿಲ್ಲಾ ವರದಿಗಾರ ಸದಾಶಿವ ಎಂ.ಎಸ್. ಅವರನ್ನು ಆಯ್ಕೆ ಮಾಡಲಾಗಿದೆ.

ಇತ್ತೀಚಿಗೆ ಸಂಘದ ಅಧ್ಯಕ್ಷ ಟಿ .ಬಿ. ಹರಿಕಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಮೂವರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ 2016ರಿಂದ ಟ್ಯಾಗೋರ್ ಪತ್ರಿಕಾ ಪ್ರಶಸ್ತಿಯನ್ನು ನೀಡುತ್ತಾ ಬರಲಾಗುತ್ತಿದ್ದು, ಕಾರವಾರದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಹೊರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದ ಈರ್ವರನ್ನು ಪ್ರತಿವರ್ಷ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ವರ್ಷ ತಾಲೂಕಿನ ಸಿದ್ದರ ಗ್ರಾಮದಲ್ಲಿ ಜುಲೈ 25ರಂದು ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಟ್ಯಾಗೋರ್ ಪತ್ರಿಕಾ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ವಿವೇಕ ಮಹಾಲೆ: ಭಟ್ಕಳ ಮೂಲದ ವಿವೇಕ ಮಹಾಲೆ ಅವರು 20 ವರ್ಷಕ್ಕೂ ಅಧಿಕ ಸಮಯದಿಂದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೊಸ ದಿಗಂತ’ ಪತ್ರಿಕೆಯ ಅರೆಕಾಲಿಕ ವರದಿಗಾರರಾಗಿ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದ ಅವರು, ಉಷಾಕಿರಣ, ಧ್ಯೇಯನಿಷ್ಠ ಪತ್ರಕರ್ತ, ಕನ್ನಡ ಜನಾಂತರಂಗ, ಸಂಯುಕ್ತ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ವಿಜಯ ಕರ್ನಾಟಕದ ಶಿವಮೊಗ್ಗ ಜಿಲ್ಲಾ ಆವೃತ್ತಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶೇಷಗಿರಿ ಮುಂಡಳ್ಳಿ: ಭಟ್ಕಳ ಮೂಲದ ಇವರು, ಪತ್ರಿಕೆ, ಹಾಲು ಮಾರಾಟ ಮಾಡುವ ಮೂಲಕ ಪ್ರೌಢ ಶಿಕ್ಷಣದ ಪಡೆದಿದ್ದರು. ಡ್ರಾಯಿಂಗ್, ಪೇಂಟಿಂಗ್ ಅನ್ನು ಕೂಡ ಕರಗತ ಮಾಡಿಕೊಂಡಿರುವ ಇವರು, ಕರಾವಳಿ ಮುಂಜಾವು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದರು. ನಂತರದಲ್ಲಿ ಕಸ್ತೂರಿ ನ್ಯೂಸ್ ನ ಉತ್ತರಕನ್ನಡ ಜಿಲ್ಲಾ ವರದಿಗಾರರಾಗಿ, ಪ್ರಸ್ತುತ ದಿಗ್ವಿಜಯ ನ್ಯೂಸ್ ನ ಉತ್ತರಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸದಾಶಿವ ಎಂ.ಎಸ್. : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮೂಲದ ಇವರು, ಕಳೆದ ಮೂರೂವರೆ ವರ್ಷಗಳಿಂದ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಉತ್ತರಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಝೀ ಕನ್ನಡ, ಸುವರ್ಣ ನ್ಯೂಸ್, ಜನಶ್ರೀ ಸುದ್ದಿವಾಹಿನಿಗಳಲ್ಲೂ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು, ದಾವಣಗೆರೆ ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸಿರುವ ಇವರು, ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಳೆರಡರ ಕಾರ್ಯಾನುಭವ ಹೊಂದಿದ್ದಾರೆ.

Exit mobile version