Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಸೋಮೇಶ್ವರ ಕಡಲತೀರ

ಬೈಂದೂರು ರಾಷ್ಟ್ರೀಯ ಹೆದ್ದಾರಿಯಿಂದ 4 ಕಿ.ಮೀ ದೂರದಲ್ಲಿರುವ ಸೋಮೇಶ್ವರ ಕಡಲತೀರ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿ ಗುರುತಿಸಿಕೊಂಡಿದ್ದು ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. 2 ಕಿ.ಮೀ ಉದ್ದದ ಸೋಮೇಶ್ವರ ಕಡಲತೀರದ ನೋಟ ಮನಮೋಹಕವಾದುದು. ತೆರೆಗಳು ಬಂಡೆಗಪ್ಪಳಿಸುವ ದೃಶ್ಯ, ಸಮುದ್ರ ಹಾಗೂ ನದಿಯ ಸಂಗಮ ಸ್ಥಾನದ (ಅಳಿವೆ) ಇವೆಲ್ಲದರ ಸೌಂದರ್ಯವನ್ನು ವರ್ಣಿಸಲಸಾಧ್ಯ. ಶ್ರೀ ಸೋಮೇಶ್ವರ ದೇವಾಲಯದಿಂದಾಗಿ ಈ ತೀರಕ್ಕೆ ಸೋಮೇಶ್ವರ ಕಡಲತೀರ ಎಂಬ ಹೆಸರು ಬಂದಿದ್ದು ಈ ತೀರದ ಮೂಲಕವೇ ಬ್ರಿಟಿಷರು ವ್ಯಾಪಾರ ವಹಿವಾಟು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳು ತಿಳಿಸುತ್ತದೆ. ದೇವಳದ ಪಕ್ಕದಲ್ಲೇ ಎಂದಿಗೂ ಬತ್ತದ ನಾಗತೀರ್ಥವಿದ್ದು ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿ ಸಿಹಿನೀರು ಶೇಖರಣೆಯಾಗುತ್ತದೆ. ಪಕ್ಕದಲ್ಲೇ ಉಪ್ಪು ನೀರಿನ ಸಮುದ್ರವಿದ್ದರೂ ಇಲ್ಲಿನ ನಾಗತೀರ್ಥ ಮಾತ್ರ ಸಿಹಿಯಾಗಿರುವುದು ಇಲ್ಲಿನ ನೈಸರ್ಗಿಕ ವೈಶಿಷ್ಟ್ಯವೇ ಸರಿ.

ಒಂದೆಡೆ ದೇವಸ್ಥಾನ, ಮತ್ತೊಂದೆಡೆ ಪ್ರವಾಸಿತಾಣ ಇರುವ ಈ ಅಪರೂಪದ ಕ್ಷೇತ್ರವನ್ನು ಸಂದರ್ಶಿಸಲು ದಿನಪ್ರತಿ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಈ ಸ್ಥಳದ ಬಗೆಗೆ ಪ್ರವಾಸಿಗರಿಗೆ ಮಾಹಿತಿ ಇಲ್ಲದಿರುವುದರಿಂದ ಹಲವರು ಈ ಸುಂದರ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.

Exit mobile version