Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ರೋಟರಿ ಕ್ಲಬ್‌ನಿಂದ ನೂತನ ಪದಾಧಿಕಾರಿಗಳ ಪದಗ್ರಹಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರೋಟರಿ ಕ್ಲಬ್‌ನ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಇಲ್ಲಿನ ಸ.ವಿ. ಪದವಿ ಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ರೋಟರಿಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲೆ ೩೧೮೨ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ, ರೋಟರಿ ಸಂಸ್ಥೆಯು ಹಲವಾರು ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದೆ. ರೋಟರಿ ಸದಸ್ಯರು ನಿಸ್ವಾರ್ಥವಾಗಿ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆಯಾ ಪ್ರದೇಶದ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಅನೇಕ ಉತ್ತಮ ಸೇವೆಗಳ ಮೂಲಕ ಉತ್ತಮ ಹೆಸರು ಪಡೆದುಕೊಂಡಿರುವ ಗಂಗೊಳ್ಳಿ ರೋಟರಿ ಸಂಸ್ಥೆ ರೋಟರಿಯ ಧ್ಯೇಯೋದ್ದೇಶಗಳಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ನೂತನ ಅಧ್ಯಕ್ಷ ರಾಜೇಶ ಎಂ.ಜಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಸಂಚಾಲಕ ಎಸ್.ನಿತ್ಯಾನಂದ ಪೈ ಮತ್ತು ಜೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್ ಶುಭಾಶಂಸನೆಗೈದರು. ಇದೇ ಸಂದರ್ಭ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕ ಪಡೆದ ಪ್ರಸನ್ನಾ ಪೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಪತ್ರಿಕೆ ಗಂಗಾ ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭ12 ಮಂದಿ ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.

ನಿರ್ಗಮನ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಎಂ.ನಾಗೇಂದ್ರ ಪೈ ವರದಿ ವಾಚಿಸಿದರು. ಪ್ರೇಮಾ ಸಿ.ಪೂಜಾರಿ, ಸುಗುಣ ಆರ್.ಕೆ. ಮತ್ತು ಉಮೇಶ ಮೇಸ್ತ ಅತಿಥಿಗಳನ್ನು ಹಾಗೂ ಪ್ರದೀಪ ಡಿ.ಕೆ. ಸನ್ಮಾನಿತರನ್ನು ಪರಿಚಯಿಸಿದರು. ಅಶೋಕ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ನಾರಾಯಣ ಇ.ನಾಯ್ಕ್ ವಂದಿಸಿದರು.

Exit mobile version