Kundapra.com ಕುಂದಾಪ್ರ ಡಾಟ್ ಕಾಂ

ಸಚಿವ ಸ್ಥಾನಕ್ಕಾಗಿ ಯಾರ ಕಾಲಿಗೂ ಬೀಳಲು ಸಿದ್ದವಿಲ್ಲ. ಕೊಟ್ಟರೆ ನಿಭಾಯಿಸುತ್ತೇನೆ: ಶಾಸಕ ಹಾಲಾಡಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಸಚಿವ ಸ್ಥಾನಕ್ಕಾಗಿ ಯಾರ ಬಳಿಯೂ ಕೇಳಲ್ಲ. ಬೆಂಗಳೂರಿಗೆ ಹೋಗಿ ಸಚಿವ ಸ್ಥಾನಕ್ಕಾಗಿ ಯಾರ ಕಾಲಿಗೂ ಬೀಳುವುದಿಲ್ಲ. ಯಾವ ನಾಯಕನ ಹಿಂದೆಯೂ ತಿರುಗಾಡಲು ಹೋಗಲ್ಲ. ನಾನಿನ್ನು ರಾಜಕೀಯದಲ್ಲಿ ಸ್ವಾಭಿಮಾನ ಬಿಟ್ಟಿಲ್ಲ. ಈ ಹಿಂದೆ ನನ್ನನ್ನು ಕರೆದು ತಪ್ಪು ಮಾಡಿದ್ದರು. ಆಗಲೂ ನಾನು ಸಚಿವ ಸ್ಥಾನ ಕೇಳಿರಲಿಲ್ಲ. ಈಗಲೂ ಕೇಳಲು ಹೋಗಲ್ಲ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಸಂಪುಟ ರಚನೆಯ ಕಸರತ್ತು ಜೋರಾಗಿದ್ದು ಆಕಾಂಕ್ಷಿಗಳು ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾತ್ರ ನೇರ ನುಡಿಯ ಮೂಲಕ ನಾಯಕರಿಗೆ ಬಿಸಿಮುಟ್ಟಿಸಿದ್ದಾರೆ.

ನಾನೆಂದೂ ರಾಜಕೀಯದಲ್ಲಿ ಲಾಬಿ, ಜಾತಿವಾದಿತನ ನಾನು ಮಾಡಿಲ್ಲ, ಮಾಡುವುದು ಇಲ್ಲ. ಯಾರ ಕಾಲಿಗೆ ಬಿದ್ದು ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ನಾನು ಅದನ್ನು ನಿಭಾಯಿಸುತ್ತೇನೆ. ಶ್ರದ್ಧೆಯಿಂದ ಮಾಡುತ್ತೇನೆ. ಶಾಸಕನಾಗಿ ಜನ ಸೇವೆಯನ್ನು ಐದು ಅವಧಿಯಲ್ಲೂ ಮಾಡುತ್ತಿದ್ದೇನೆ ಎಂದವರು ಹೇಳಿದ್ದಾರೆ.

ಈವರೆಗೆ ನನಗೆ ಯಾರಿಂದಲೂ ಯಾವುದೇ ಕರೆಗಳು ಮಾಹಿತಿಗಳು ಬಂದಿಲ್ಲ. ಒಂದು ವೇಳೆ ನನ್ನನ್ನು ಮಂತ್ರಿ ಮಾಡಿದರೆ ಸರ್ಕಾರಿ ಕಾರು, ಎಸ್ಕಾರ್ಟ್, ಗನ್ ಮ್ಯಾನ್ ತೆಗೆದುಕೊಳ್ಳುವುದಿಲ್ಲ. ನಾನು ಜನರ ಜೊತೆ ಕೆಲಸ ಮಾಡುವವನು ನನಗೆ ಯಾವ ಜೀವ ಭಯವಿಲ್ಲ. ನಾಯಕರಿಂದ ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ಧನಿದ್ದೇನೆ. ನಾನು ಹೆಡ್ಡ ರಾಜಕಾರಣಿ ಅಲ್ಲ. ನನ್ನದು ನೇರನುಡಿಯ ರಾಜಕಾರಣ. ದುರಹಂಕಾರ ಅಲ್ಲ, ಯಾರ ಭಯದಲ್ಲೂ ಇಲ್ಲ. ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು ಎಂದಿದ್ದಾರೆ.

ಶ್ವಾಸ ಇದ್ದರೆ ಸಚಿವ ಸ್ಥಾನ ಕೇಳಲು ಹೋಗಲ್ಲ. ನಾನು ಜಾತ್ಯಾತೀತ ರಾಜಕಾರಣಿ. ನನ್ನ ಹುಟ್ಟಿನಿಂದ ನಾನು ಜಾತಿ ಸಂಘರ್ಷಕ್ಕೆ ಹೋಗಿಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ಧಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿದ್ದಲ್ಲ. ಜಾತಿವಾದಿಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು, ಶಾಸಕರಾಗಲೇಬಾರದು. ಜಾತಿವಾದಿಗಳು ಜಾತಿಯ ಸಂಘಕ್ಕೆ ಸಚಿವರಾಗಬೇಕು. ಸ್ಥಾನಮಾನ ಕೇಳುವುದು ಪ್ರಜಾಪ್ರಭುತ್ವ ಅಲ್ಲ ಕೇಳಿ ಸಚಿವ ಸ್ಥಾನವನ್ನ ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಕೇಳಿ ಅಧಿಕಾರವನ್ನು ಪಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ ಎಂದಿದ್ದಾರೆ. ಉಪಯೋಗಕ್ಕೆ ಇಲ್ಲದ್ದನ್ನ ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವುದು ಇಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

Exit mobile version