Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಪ್ರದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸೇವಾ ಮನೋಭಾವನೆಯಿಂದ ಲಭಿಸುವ ಯಶಸ್ಸು ಶಾಸ್ವತವಾಗಿದ್ದು, ಈ ನಿಟ್ಟಿನಲ್ಲಿ ಕಳೆದ 116 ವರ್ಷಗಳಿಂದ ವಿಶ್ವದಾದ್ಯಂತ ಸೇವಾಕಾರ್ಯದಲ್ಲಿ ತೊಡಗಿರುವ ರೋಟರಿಯಲ್ಲಿ ಸದಸ್ಯರಾಗಿ ಕಾರ್ಯೊನ್ಮುಖರಾದರೆ ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಹಕಾರಿಯಾಗುವುದು. ಹಾಗೆಯೇ ಕಷ್ಟದಲ್ಲಿರುವವರನ್ನು ಗುರುತಿಸಿ ತಕ್ಷಣ ಅಂತವರನ್ನು ಸ್ಪಂದಿಸಿ ಸ್ವಲ್ಪ ಮಟ್ಟಿನ ಪರಿಹಾರ ನೀಡಿದರೆ ಸೇವೆಯಲ್ಲಿ ಸಾರ್ಥಕತೆ ಕಾಣಬಹುದು ಎಂದು ರೋಟರಿ ವಲಯ ಒಂದರ ಸಹಾಯಕ ಗವರ್ನರ್ ಜಯಪ್ರಕಾಶ್ ಶೆಟ್ಟಿ ಹೇಳಿದರು.

ಅವರು, ಯಡ್ತರೆ ಬಂಟರ ಭವನದಲ್ಲಿ ನಡೆದ 2021-22ನೇ ಸಾಲಿನ ಬೈಂದೂರು ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು.

ಪ್ರತಿಯೊಂದಲ್ಲಿಯೂ ಸಮಯಪ್ರಜ್ಞೆ ಮತ್ತು ಶಿಸ್ತಿನ ಸೇವಾ ಕಾರ್ಯಾಚರಣೆ ಮೂಲಕ ಸಾಗುತ್ತಿರುವ ರೋಟರಿಯು ಜನರ ನಂಬಿಕೆಗೆ ಪಾತ್ರವಾಗಿದೆ. ಸೇವಾಕಾಂಕ್ಷಿ ಮಾನವ ಸಂಪನ್ಮೂಲಗಳನ್ನು ಸಮರ್ಥವಾಗಿ ಕ್ರೂಢಿಕರಿಸಿ ಅವರಲ್ಲಿ ಶ್ರೇಷ್ಠ ನಾಯಕತ್ವದ ಗುಣಗಳನ್ನು ಬೆಳೆಸುವ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಸಂಸ್ಥೆಯ ಪಾತ್ರ ದೊಡ್ಡದಿದೆ ಎಂದ ಅವರು, ಪ್ರಾಮಾಣಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಜನ ಗುರುತಿಸುತ್ತಾರೆ. ಒಬ್ಬರಿಂದಾಗದ ಕೆಲಸ ಸಂಸ್ಥೆಯ ಮೂಲಕ ಮಾಡಬಹುದು. ಹೀಗಾಗಿ ಎಲ್ಲರ ಸಹಭಾಗಿತ್ವ ಹಾಗೂ ಎಲ್ಲರೂ ಒಂದಾಗಿ ಬೆರೆತು ಸಂಸ್ಥೆಯನ್ನು ಮುನ್ನಡೆಸುವಲ್ಲಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ರೋಟರಿ ಬುಲೆಟಿನ್ ‘ಬಿಂದುವಾಣಿ’ಯನ್ನು ಬಿಡುಗಡೆಗೊಳಿಸಿ, ರೋಟರಿ ಈ ಸಾಲಿನ ಧ್ಯೇಯವಾಗಿರುವ ಪರಿಸರ ಕಾಳಜಿ ಬಗ್ಗೆ ಸಲಹೆ ನೀಡಿದ ಮುಖ್ಯ ಅತಿಥಿ ಡಾ. ಉಮೇಶ ಪುತ್ರನ್, ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಬ್ದಾರಿ. ನಿರಂತರ ಪ್ರಕೃತಿಯ ಮೇಲೆ ಮಾನವನ ಪ್ರಹಾರದಿಂದಾಗಿ ನೈಸರ್ಗಿಕ ಪರಿಸ್ಥಿತಿ ಎರುಪೇರಾಗಿದೆ. ನಮ್ಮ ಪರಿಸರದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮೂಲಕ ಹಾಗೂ ಪರಿಸರವನ್ನು ವಿಶೇಷ ಕಾಳಜಿಯಿಂದ ನೋಡುವುದರಿಂದ ನಿಸರ್ಗ ಉಳಿಯುತ್ತದೆ ಎಂದು ಹೇಳಿದರು.

ಈ ಸಾಲಿನ ನೂತನ ಅಧ್ಯಕ್ಷ ಡಾ. ಪ್ರವೀಣ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 16 ಜನ ಕ್ಲಬ್‌ನ ಹೊಸ ಸದಸ್ಯರಾಗಿ ನೇಮಕಗೊಂಡರು. ೪೫ ಆಟೋ ಚಾಲಕರಿಗೆ ಗೌರವ ಪುರಸ್ಕಾರ, ವೈದ್ಯಕೀಯ ನೆರವು, ಪ್ರತಿಭಾ ಪುರಸ್ಕಾರ ನಡೆಯಿತು. ವಲಯ ಸೇನಾನಿ ರಾಮನಾಥ ನಾಯಕ್, ನಿರ್ಗಮಿತ ಕಾರ್ಯದರ್ಶಿ ಗೋವಿಂದ ಎಂ. ಉಪಸ್ಥಿತರಿದ್ದರು. ನಿರ್ಗಮಿತ ಅಧ್ಯಕ್ಷ ಯು. ಗೋಪಾಲ ಶೆಟ್ಟಿ ಸ್ವಾಗತಿಸಿ, ಸುಧಾಕರ ಪಿ. ನಿರೂಪಿಸಿದರು.

ನೂತನ ಕಾರ್ಯದರ್ಶಿ ವೈ. ಮಂಗೇಶ್ ಶ್ಯಾನುಭಾಗ್ ವಂದಿಸಿದರು. ಕೊನೆಯಲ್ಲಿ ಡಾ. ಪ್ರವೀಣ್ ಶೆಟ್ಟಿ -ನೂತನ ಪಿ. ಶೆಟ್ಟಿ ದಂಪತಿಗಳ ಪುತ್ರ ಶ್ರೇಷ್ಟಾ ಇವನ ನಾಲ್ಕನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.

Exit mobile version